ವಾಷಿಂಗ್ಟನ್(ಅಮೆರಿಕ): ದೇಶದಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಅಮೆರಿಕದ ಆರ್ಥಿಕತೆ ಹಿಂಜರಿತದತ್ತ ಸಾಗುತ್ತಿದ್ದರೂ ತಂತ್ರಜ್ಞಾನ ವಲಯ ಬೆಳವಣಿಗೆ ಕಾಣಲಿದೆ ಎಂದು ಸಿಲಿಕಾನ್ ವ್ಯಾಲಿಯ ಸಿಇಓಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2008 ರಲ್ಲಿ ವಿಶ್ವ ಅನುಭವಿಸಿದ್ದ ಆರ್ಥಿಕ ಹಿಂಜರಿತಕ್ಕಿಂತಲೂ ಕೊರೊನಾ ವೈರಸ್ ಸೃಷ್ಟಿಸಲಿರುವ ಹಿಂಜರಿತ ಹೆಚ್ಚಾಗಿರಲಿದೆ ಎಂದು ಭಾರತೀಯ-ಅಮೆರಿಕನ್ ಉದ್ಯಮಿಗಳನ್ನು ಒಗ್ಗೂಡಿಸಲು ಹಾಗೂ ಭಾರತ ಮತ್ತು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲು ಸ್ಥಾಪಿಸಲಾದ ಇಂಡಿಯಾಸ್ಪೋರಾ (Indiaspora) ಸಂಘಟನೆಯ ಸಂಸ್ಥಾಪಕ ಎಂ ಆರ್ ರಂಗಸ್ವಾಮಿ ಹೇಳಿದ್ದಾರೆ.
'ಅಮೆರಿಕದ ಆರ್ಥಿಕತೆ ಖಂಡಿತವಾಗಿಯೂ ಹಿಂಜರಿತವನ್ನು ಅನುಭವಿಸುತ್ತಿದೆ. ಆದಾಗ್ಯೂ ತಂತ್ರಜ್ಞಾನ ಕಂಪನಿಗಳ ಸಿಇಓಗಳು ಸಕಾರಾತ್ಮಕ ಆರ್ಥಿಕ ಬೆಳವಣಿಗೆಯ ಬಗ್ಗೆ ಆಶಾವಾದಿಗಳಾಗಿದ್ದಾರೆ' ಎಂದು ಸಿಲಿಕಾನ್ ವ್ಯಾಲಿಯಲ್ಲಿ ಉನ್ನತ ಸ್ಥಾನದಲ್ಲಿರುವ ಉದ್ಯಮಿ, ಸಾಫ್ಟವೇರ್ ಎಕ್ಸಿಕ್ಯುಟಿವ್ ಒಬ್ಬರು ತಿಳಿಸಿದ್ದಾರೆ.
'ಕೊರೊನಾ ವೈರಸ್ನ ಪರಿಣಾಮಗಳು ಹಠಾತ್ತಾಗಿ ಹಾಗೂ ಬೃಹತ್ ಪ್ರಮಾಣದಲ್ಲಿ ಅಪ್ಪಳಿಸಿವೆ. ಈ ಹಿಂದಿನ ಎರಡು ಆರ್ಥಿಕ ಬಿಕ್ಕಟ್ಟುಗಳಿಗಿಂತ ಇದು ದೊಡ್ಡದಾಗಿರಲಿದೆ' ಎನ್ನುತ್ತಾರೆ ರಂಗಸ್ವಾಮಿ.