ವಾಷಿಂಗ್ಟನ್: ಅಮೆರಿಕದಿಂದ ಭಾರತಕ್ಕೆ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಈ ವರ್ಷ ಇಲ್ಲಿಯವರೆಗೆ 40 ಬಿಲಿಯನ್ ಡಾಲರ್ ದಾಟಿದ್ದು, ಇದು ದೇಶದಲ್ಲಿ ಅಮೆರಿಕದ ಕಂಪನಿಗಳ ಹೆಚ್ಚುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಎಂದು ಅಮೆರಿಕ–ಭಾರತ ಕಾರ್ಯತಂತ್ರ ಮತ್ತು ಸಹಭಾಗಿತ್ವ ವೇದಿಕೆಯ (ಯುಎಸ್‌ಐಎಸ್‌ಪಿಎಫ್) ಮುಖ್ಯಸ್ಥರು ಹೇಳಿದ್ದಾರೆ.
ಕೊರೊನಾ ಸೋಂಕಿನಿಂದಾಗಿ ವಿಶ್ವ ಆರ್ಥಿಕತೆಯೇ ವೈರಸ್ ವಿರುದ್ಧ ಸೆಣಸಾಡುತ್ತಿದೆ. ಅಮೆರಿಕದ ಕಂಪನಿಗಳು ಇದರ ನಡುವೆಯೂ ಭಾರತದಲ್ಲಿನ ನಾಯಕತ್ವಕ್ಕೆ ವಿಶ್ವಾಸ ಸೂಚಿಸುವಂತಿದೆ. ಪ್ರಸ್ತಕ್ತ ವರ್ಷದ ಇಲ್ಲಿಯವರೆಗೆ ಅಮೆರಿಕದ ಕಂಪನಿಗಳು ಭಾರತದಲ್ಲಿ 3 ಲಕ್ಷ ಕೋಟಿ ರೂ.ಎಫ್‌ಡಿಐ ಹೂಡಿಕೆ ಮಾಡಿವೆ ವೇದಿಕೆಯ ಅಧ್ಯಕ್ಷ ಮುಕೇಶ್ ಅಘಿ ತಿಳಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ಗೂಗಲ್, ಫೇಸ್ಬುಕ್ ಹಾಗೂ ಇ- ಕಾಮರ್ಸ್ ದೈತ್ಯ ವಾಲ್ಮಾರ್ಟ್ನಂತಹ ಕಂಪನಿಗಳ ಹೂಡಿಕೆಯ ಮೊತ್ತವೇ 1.5 ಲಕ್ಷ ಕೋಟಿಯಷ್ಟಿದೆ. ವಿಶ್ವದ ಹೂಡಿಕೆದಾರರಿಗೆ ಭಾರತ ಈಗಲೂ ನೆಚ್ಚಿನ ಮಾರುಕಟ್ಟೆಯ ತಾಣವಾಗಿದೆ. ದೇಶದ ಬಗೆಗಿನ ಹೂಡಿಕೆದಾರರ ವಿಶ್ವಾಸವು ವೃದ್ಧಿಸುತ್ತಿದೆ. ಅಮೆರಿಕದ ಜೊತೆಗೆ ಮಧ್ಯಪ್ರಾಚ್ಯದ ರಾಷ್ಟ್ರಗಳಿಂದೂ ಹೂಡಿಕೆಯು ಹರಿದುಬರುತ್ತಿದೆ ಎಂದರು.