ನವದೆಹಲಿ: ಮೋದಿ ಸರ್ಕಾರ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿನ ನಿಷ್ಕ್ರಿಯ ಆಸ್ತಿಗಳನ್ನು (ಎನ್‌ಪಿಎ) ಮುಟ್ಟುಗೋಲು ಹಾಕಲು ಪ್ರಯತ್ನಿಸಿದ್ದು, 2014ರಿಂದ 4 ಲಕ್ಷ ಕೋಟಿ ಹಣ ವಸೂಲು ಮಾಡಲಾಗಿದೆ. ಇದು ಮೋದಿ ಸರ್ಕಾರದ ಪ್ರಮುಖ ಸಾಧನೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ಹೇಳಿದ್ದಾರೆ.
ಇನ್ಸ್‌ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ)ದ 70ನೇ ವಾರ್ಷಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವರು, 2014ರಲ್ಲಿ ಮೋದಿ ಅಧಿಕಾರ ವಹಿಸಿಕೊಂಡಾಗ ಎನ್‌ಪಿಎ 52 ಲಕ್ಷ ಕೋಟಿ ರೂ. ಆಗಿದ್ದು, ಅದನ್ನು ಸರಿಪಡಿಸಲು ಬಹಳ ಪ್ರಯತ್ನಿಸಿದ್ದಾರೆ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಹಣಕಾಸು ಸಂಸ್ಥೆಗಳು ಕಾನೂನಾತ್ಮಕ ಪ್ರಯತ್ನ ಕೈಗೊಂಡಿದ್ದು, ಎನ್‌ಪಿಎಗಳನ್ನು 18 ಲಕ್ಷ ಕೋಟಿಗೆ ಇಳಿಸಲಾಗಿದೆಯೆಂದರು. ಇನ್ನೂ ಈ ಕ್ರಮಕ್ಕೆ ಚಾರ್ಟೆಡ್ ಅಕೌಂಟೆಂಟ್ಗಳ ಸಹಕಾರ ಕೋರಿದರು.
ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಸಹಕರಿಸುವುದು ನಮ್ಮ ಪ್ರಮುಖ ಜವಾಬ್ದಾರಿಯಾಗಿದೆಯೆಂದರು. ಇನ್ನೂ ಕೇವಲ ಆಧಾರ್ ಮಾಹಿತಿಯಿಂದ ಪ್ಯಾನ್ ಕಾರ್ಡ್ ಕೊಡಲು ಸರ್ಕಾರ ಚಿಂತಿಸಿದೆಯೆಂದು ತಿಳಿಸಿದರು. ಅಲ್ಲದೇ ತೆರಿಗೆ ಪಾವತಿದಾರರಿಗೆ ಸರ್ಕಾರದ ವಿವಿಧ ತೆರಿಗೆ ಪಾವತಿಸುವ ಸ್ನೇಹಿ ಯೋಜನೆಗಳನ್ನು ಪರಿಚಯಿಸಲಾಗಿದೆಯೆಂದರು.
2025ರ ವೇಳೆಗೆ ದೇಶವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಗುರಿ ತಲುಪುವ ಮಾರ್ಗಕ್ಕೆ ಯಾರಿಂದಲೂ ಅಡ್ಡಿಪಡಿಸಲು ಸಾಧ್ಯವಿಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿದರು. ಭ್ರಷ್ಟಾಚಾರ ನಿರ್ಮೂಲನೆಗೆ ಚಾರ್ಟರ್ಡ್ ಅಕೌಂಟೆಂಟ್ಸ್ಗಳ ಸಹಕಾರ ಕೋರಿದರು.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾತನಾಡಿ, ಸಿಎಗಳು ರಾಷ್ಟ್ರದ ಆರ್ಥಿಕತೆಯ ಬೆನ್ನೆಲುಬು ಮಾತ್ರವಲ್ಲ, ಅತ್ಯುತ್ತಮ ಆಡಳಿತಗಾರರು, ತಂತ್ರಜ್ಞರು ಮತ್ತು ಸಲಹೆಗಾರರೂ ಆಗಿದ್ದಾರೆ ಎಂದು ಶ್ಲಾಘಿಸಿದರು. ''ಸಿಎಗಳು ದೇಶದ ಆರ್ಥಿಕ ವ್ಯವಸ್ಥೆಯ ವಿಶ್ವಾಸಾರ್ಹ ರಾಯಭಾರಿಗಳು ಮತ್ತು ಯಾವುದೇ ಖಾತೆಯಲ್ಲಿನ ಅವರ ಸಹಿಗಳು ಸತ್ಯಾನುಸತ್ಯತೆಗೆ ಸಾಕ್ಷಿಯಾಗಿದೆ" ಎಂದು ಅವರು ಹೇಳಿದರು.