ಅಬುದಾಬಿ: ಪ್ರಧಾನ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಡಿಜಿಟಲ್ ಇಂಡಿಯಾದ ಭಾಗವಾಗಿ ಜಾರಿಗೆ ತಂದಿರುವ ಆನ್‌ಲೈನ್ ವ್ಯವಸ್ಥೆಯ 'ರೂಪೇ ಕಾರ್ಡ್' ಮಧ್ಯಪ್ರಾಚ್ಯದ ಯುಎಇನಲ್ಲಿ ಬಿಡುಗಡೆ ಆಗಲಿದೆ.
ಈ ವಾರಾಂತ್ಯದಲ್ಲಿ ಪಿಎಂ ಮೋದಿ ಯುಎಇ(ಯುನೈಟೆಡ್ ಅರಬ್ ಎಮಿರೇಟ್ಸ್)ಗೆ ಭೇಟಿ ನೀಡಲಿದ್ದು, ಈ ಸಂದರ್ಭ ಭಾರತೀಯ ಸ್ಥಳೀಯ ಮಾಸ್ಟರ್‌ಕಾರ್ಡ್ ಅಥವಾ ವೀಸಾಗೆ ಸಮಾನವಾದ ರೂಪೇ ಕಾರ್ಡ್ ಯುಎಇಯಲ್ಲಿ ಜಾರಿಗೆ ಬರಲಿದೆ.
ಯುಎಇಯಲ್ಲಿನ ಭಾರತೀಯ ರಾಯಭಾರಿ ನವದೀಪ್ ಸಿಂಗ್ ಸೂರಿ ಮಾತನಾಡಿ, ಭಾರತ ಮತ್ತು ಯುಎಇ ನಡುವೆ ಪಾವತಿ ವೇದಿಕೆಯ ತಂತ್ರಜ್ಞಾನ ಮಧ್ಯಸ್ಥಿಕೆಯ ಕುರಿತು ತಿಳುವಳಿಕೆ ಪತ್ರಕ್ಕೆ (ಎಂಒಯು) ಉಭಯ ರಾಷ್ಟ್ರಗಳು ಸಹಿ ಹಾಕಲಿವೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಯುಎಇನ ಮರ್ಕ್ಯುರಿ ಪಾವತಿ ಸೇವಾ ನಡುವೆ ಈ ಒಪ್ಪಂದ ಏರ್ಪಡಲಿದೆ. ಯುಎಇನಾದ್ಯಂತ ಇರುವ ಪಾಯಿಂಟ್-ಆಫ್-ಸೆಲ್ಸ್ ಕೇಂದ್ರಗಳಲ್ಲಿ ಈ ರೂಪೇ ಕಾರ್ಡ್ಗಳು ಬಳಸಬಹುದಾಗಿದೆ ಎಂದರು.
ಯುಎಇನಲ್ಲಿ ಅತಿಹೆಚ್ಚು ಭಾರತೀಯ ಸಮುದಾಯದವರು ನೆಲೆಕಂಡುಕೊಂಡಿದ್ದು, ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಜೊತೆಗೆ ಭಾರತದೊಂದಿಗೆ ಯುಎಇ ಅತ್ಯಧಿಕ ಪ್ರಮಾಣ ವ್ಯಾಪಾರ-ವಹಿವಾಟು ಹೊಂದಿದೆ. ರೂಪೇ ಕಾರ್ಡ್ ಮಾನ್ಯತೆಯ ಮೂಲಕ ಭಾರತೀಯ ಪ್ರವಾಸಿಗರು, ವ್ಯಾಪಾರ ಮತ್ತು ವಲಸಿಗರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತದ ರೂಪೇ ಕಾರ್ಡ್ ಈಗಾಗಲೇ ಸಿಂಗಾಪುರ ಮತ್ತು ಭೂತಾನ್‌ನಲ್ಲಿ ಬಿಡುಗಡೆಯಾಗಿ ಬಳಕೆಯಲ್ಲಿದೆ. ಎರಡೂ ರಾಷ್ಟ್ರಗಳ ಸ್ನೇಹ-ಬಾಂಧವ್ಯ ವೃದ್ಧಿಸಿಕೊಳ್ಳಲು ಮತ್ತೊಂದಿಷ್ಟು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು.