ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್ಗಳ ವಿಲೀನ ವಿರೋಧಿಸಿ ಎರಡು ಬ್ಯಾಂಕ್ ನೌಕರರ ಸಂಘಟನೆಗಳು ಒಂದು ದಿನ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಈ ದಿನ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಮತ್ತು ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಆಫ್ ಇಂಡಿಯಾ (ಬಿಇಎಫ್‌ಐ) ಅಕ್ಟೋಬರ್ 22ರ ಬೆಳಗ್ಗೆ 6 ರಿಂದ ಅಕ್ಟೋಬರ್ 23ರವರೆಗೆ ಬ್ಯಾಂಕ್ ಮುಷ್ಕರ ನಡೆಸುವುದಾಗಿ ಭಾರತೀಯ ಬ್ಯಾಂಕ್ಗಳ ಸಂಘಕ್ಕೆ ನೋಟಿಸ್ ಮೂಲಕ ತಿಳಿಸಿವೆ.
ಬ್ಯಾಂಕ್ಗಳ ವಿಲೀನದ ವಿರುದ್ಧ ಎರಡು ಬ್ಯಾಂಕ್ ಒಕ್ಕೂಟಗಳು ಮಾತ್ರ ಮುಷ್ಕರ ನಡೆಸುವುದರಿಂದ ಇದರ ಪರಿಣಾಮ ಅಷ್ಟಾಗಿ ಬೀರದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಂದಾಜಿಸಿದೆ. ಮತ್ತೊಂದೆಡೆ, ಬ್ಯಾಂಕ್ ಆಫ್ ಬರೋಡಾ, ಮುಷ್ಕರ ದಿನದಂದು ತನ್ನ ಶಾಖೆಗಳು ಮತ್ತು ಇತರ ಕಚೇರಿಗಳನ್ನು ಸುಗಮವಾಗಿ ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದೆ. ಮುಷ್ಕರವು ಕಾರ್ಯರೂಪಕ್ಕೆ ಬಂದರೆ ಬ್ಯಾಂಕ್ ಶಾಖೆಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು.
ಪ್ರತಿಭಟನೆ ಅವಧಿಯಲ್ಲಿ ಬ್ಯಾಂಕ್ಗಳ ಯಾವುದೇ ಸೇವೆಗಳು ಸಾರ್ವಜನಿಕರಿಗೆ ಲಭಿಸುವುದಿಲ್ಲ. ಅಕ್ಟೋಬರ್ 22ಕ್ಕೂ ಮೊದಲೇ ಬ್ಯಾಂಕಿಂಗ್ ಮತ್ತು ಹಣಕಾಸು ಕೆಲಸಗಳನ್ನು ಮುಗಿಸಿಕೊಳ್ಳುವುದು ಉತ್ತಮ. ಅಗತ್ಯವಾದ ಹಣ ಇರಿಸಿಕೊಳ್ಳುವಿಕೆ, ಹಣ ಪಾವತಿ, ಮನಿ ಟ್ರಾನ್ಸ್ಫರ್, ಸಾಲದ ಕಂತು ಪಾವತಿ ಸೇರಿದಂತೆ ಇತರೆ ಕೆಲಸಗಳನ್ನು ಪ್ರತಿಭಟನೆಗೂ ಮುನ್ನ ಮುಗಿಸಿಕೊಳ್ಳುವುದು ಉತ್ತಮ.