ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಚಾನಲ್ ಆಯ್ಕೆಯ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಿದೆ.
ಟ್ರಾಯ್ ಬಿಡುಗಡೆ ಮಾಡಿದ ನೂತನ ಆ್ಯಪ್ನಿಂದ ಗ್ರಾಹಕರಿಗೆ ತಮ್ಮ ಟಿವಿ ಚಂದಾದಾರಿಕೆ ವೀಕ್ಷಿಸಲು ಮತ್ತು ಅನಗತ್ಯವಾದ ಚಾನಲ್‌ಗಳ ಆಯ್ಕೆಯನ್ನು ತೆಗೆದುಹಾಕುವಂತಹ ಸುಲಭ ಹಕ್ಕು ಪಡೆಯಲಿದ್ದಾರೆ.
ಪ್ರಸಾರ ಸೇವೆಗಳಿಗೆ ಹೊಸ ಸುಂಕದ ಆದೇಶ ನೀಡಿದ ಬಳಕ ವೆಬ್ ಪೋರ್ಟಲ್, ಡಿಸ್ಟ್ರಿಬ್ಯೂಟೆಡ್ ಪ್ಲಾಟ್‌ಫಾರ್ಮ್ ಆಪರೇಟರ್‌ಗಳ (ಡಿಪಿಒ) ಚಾನಲ್ ಆಯ್ಕೆಯ ವೇಳೆ ಗ್ರಾಹಕರು ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ, ಡಿಪಿಒಗಳಿಂದ ಡೇಟಾ ಪಡೆಯುವಂತಹ ಅಪ್ಲಿಕೇಷನ್ ಅನ್ನು ಅಭಿವೃದ್ಧಿಪಡಿಸಲು ಪ್ರಾಧಿಕಾರ ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಚಾನಲ್ ಸೆಲೆಕ್ಟರ್ ಅಪ್ಲಿಕೇಷನ್ ಪ್ರಸ್ತುತ ಪ್ರಮುಖ ಡಿಟಿಹೆಚ್ ಆಪರೇಟರ್‌ಗಳು ಮತ್ತು ಮಲ್ಟಿ ಸಿಸ್ಟಮ್ ಆಪರೇಟರ್‌ಗಳೊಂದಿಗೆ (ಎಂಎಸ್‌ಒ / ಕೇಬಲ್ ಆಪರೇಟರ್‌ಗಳು) ಕಾರ್ಯನಿರ್ವಹಿಸುತ್ತಿವೆ. ಈ ಪ್ಲಾಟ್ಫಾರ್ಮ್ನಡಿ ಇತರೆ ಸೇವಾ ಪೂರೈಕೆದಾರರನ್ನು ಸಂಯೋಜಿಸುವ ಪ್ರಯತ್ನ ಸಹ ನಡೆಯುತ್ತಿದೆ ಎಂದು ಟ್ರಾಯ್ ಹೇಳಿದೆ.
ದೂರದರ್ಶನ ಚಂದಾದಾರರಿಗೆ ವಿಶ್ವಾಸಾರ್ಹ, ದೃಢವಾದ ಮತ್ತು ಪಾರದರ್ಶಕ ವ್ಯವಸ್ಥೆಗಳನ್ನು ಒದಗಿಸಲು ಟಿವಿ ಚಾನಲ್ ಸೆಲೆಕ್ಟರ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಪ್ರಾಧಿಕಾರ ಸ್ಪಷ್ಟನೆ ನೀಡಿದೆ.
ಈ ಆ್ಯಪ್ ಗೂಗಲ್ ಮತ್ತು ಆ್ಯಪಲ್ ಸ್ಟೋರ್ನಲ್ಲಿ ಲಭ್ಯವಿದ್ದು, ಗ್ರಾಹಕರು ಡೌನ್ಲೋಡ್ ಮಾಡಿಕೊಳ್ಳಬಹುದು. ಚಂದಾದಾರರನ್ನು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ (ಆರ್‌ಎಂಎನ್) ಒಟಿಪಿ ದೃಢೀಕರಿಸುತ್ತದೆ. ಡಿಪಿಒ ಹೊಂದಿರುವ ಚಂದಾದಾರರ ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದಿದ್ದರೆ, ಚಂದಾದಾರರು ಅವನ ಅಥವಾ ಅವಳ ಟಿವಿ ಪರದೆಯ ಮೇಲೆ ಒಟಿಪಿ ಪಡೆಯುತ್ತಾರೆ.
ಅಪ್ಲಿಕೇಷನ್ ಚಂದಾದಾರರಿಗೆ ತಮ್ಮದೇ ಆದ ಚಂದಾದಾರಿಕೆಯನ್ನು ಪರಿಶೀಲಿಸಲು, ಡಿಟಿಹೆಚ್ ಅಥವಾ ಕೇಬಲ್ ಆಪರೇಟರ್‌ಗಳು ಒದಗಿಸಿದ ಎಲ್ಲಾ ಚಾನಲ್‌ಗಳನ್ನು ವೀಕ್ಷಿಸಲು, ಬಾಸ್ಕೆಟ್ಗಳನ್ನು ಪಡೆಯಲು, ಆಸಕ್ತಿಯ ಚಾನಲ್‌ಗಳ ಆಯ್ಕೆ ಮತ್ತು ಅನಗತ್ಯ ಚಾನಲ್‌ಗಳನ್ನು ತೆಗೆದುಹಾಕಲು ಅನುಕೂಲವಾಗಲಿದೆ.