ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಏಕಾಏಕಿ ಹಬ್ಬುತ್ತಿರುವ ಹಿನ್ನೆಲೆ ಸೋಂಕು ಹರಡುವುದನ್ನು ತಡೆಯಲು ಹಲವು ರಾಜ್ಯಗಳು ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿವೆ. ಕೊರೊನಾ ಕರ್ಫ್ಯೂಗಳು ಮತ್ತು ಲಾಕ್‌ಡೌನ್‌ಗಳು ಜಾರಿಯಲ್ಲಿವೆ.
ಈ ನಿರ್ಧಾರಗಳು ದೇಶೀಯ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬೀರಿವೆ. ಕೊರೊನಾ ನಿರ್ಬಂಧದಿಂದಾಗಿ ಅಖಿಲ ಭಾರತ ಚೇಂಬರ್ ಆಫ್ ಕಾಮರ್ಸ್ (ಸಿಯಾಟ್) 5 ಲಕ್ಷ ಕೋಟಿ ರೂ. ನಷ್ಟದ ಅಂದಾಜು ಮಾಡಿದೆ. (ಇದು ಕರ್ನಾಟಕ ಬಜೆಟ್ನ ಎರಡು ಪಟ್ಟು ಅಧಿಕ 2.46 ಲಕ್ಷ ಕೋಟಿ ರೂ.)
ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮತ್ತು ದೇಶದ ರಾಜಧಾನಿ ದೆಹಲಿ ಸೇರಿ ಅನೇಕ ನಗರಗಳು ಮತ್ತು ಪಟ್ಟಣಗಳಲ್ಲಿ ಬಿಗಿಯಾದ ನಿರ್ಬಂಧಗಳು ಮುಂದುವರೆದಿವೆ.
ಇದರ ಪರಿಣಾಮವಾಗಿ ಆ ಪ್ರದೇಶಗಳಲ್ಲಿನ ವ್ಯಾಪಾರ ಸ್ಥಗಿತಗೊಂಡಿದ್ದು, ವ್ಯಾಪಾರಿಗಳು ತೀವ್ರವಾಗಿ ಬಳಲುತ್ತಿದ್ದಾರೆ ಎಂದು ಸಿಯಾಟ್ ತನ್ನ ವರದಿಯಲ್ಲಿ ತಿಳಿಸಿದೆ.
ಇಲ್ಲಿಯವರೆಗೆ ದೇಶಾದ್ಯಂತ ಚಿಲ್ಲರೆ ವ್ಯಾಪಾರಿಗಳು 3.5 ಲಕ್ಷ ಕೋಟಿ ರೂ. ನಷ್ಟವಾಗಿದ್ದರೇ, ಸಗಟು ವ್ಯಾಪಾರಿಗಳ ಹಾನಿ ಪ್ರಮಾಣ 1.5 ಲಕ್ಷ ಕೋಟಿ ರೂ.ಯಷ್ಟಿದೆ ಎಂದು ಅಂದಾಜಿಸಲಾಗಿದೆ.
ಈ ವರದಿಯು ಹಲವು ರಾಜ್ಯಗಳಲ್ಲಿನ ವ್ಯಾಪಾರಿ ಸಂಸ್ಥೆಗಳೊಂದಿಗೆ ಸಿಯಾಟ್ ಸಂಶೋಧನೆ ಮತ್ತು ವ್ಯಾಪಾರ ಅಭಿವೃದ್ಧಿ ಸಮಾಲೋಚನೆಗಳನ್ನ ಆಧರಿಸಿದೆ.
ಗ್ರಾಹಕರ ಭೇಟಿಯ ಹಠಾತ್ ಕುಸಿತದಿಂದಾಗಿ ನಷ್ಟವಾಗಿದೆ. ನಿರ್ಬಂಧದ ಹಿನ್ನೆಲೆ ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆ ಶೇ. 80ರಷ್ಟು ಕಡಿಮೆಯಾಗಿದೆ. ಪ್ರಮುಖ ನಗರಗಳಲ್ಲಿ ಹಾನಿ ಇನ್ನೂ ಹೆಚ್ಚಾಗಿದೆ. ದೆಹಲಿಯಲ್ಲಿ ವ್ಯಾಪಾರಿಗಳ ವ್ಯವಹಾರ ನಷ್ಟವು 25 ಸಾವಿರ ಕೋಟಿ ರೂ.ಯಷ್ಟಿದೆ.
ಕೊರೊನಾದ ಎರಡನೇ ಅಲೆಯು ಈಗಾಗಲೇ ಅನೇಕ ಕ್ಷೇತ್ರಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಇದರಿಂದಾಗಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಪರಿಸ್ಥಿತಿ ಈ ರೀತಿ ಮುಂದುವರಿದರೆ ದೇಶದ ಆರ್ಥಿಕತೆ ಮತ್ತೆ ಅಪಾಯಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿದ್ದಾರೆ.