ಹೈದರಾಬಾದ್: ದೇಶದ ಅತಿ ದೊಡ್ಡ ಸಾಫ್ಟ್‌ವೇರ್ ರಪ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಆರ್ಥಿಕ ವರ್ಷ 2021-22ನೇ ಸಾಲಿನಲ್ಲಿ 40 ಸಾವಿರಕ್ಕೂ ಅಧಿಕ ಹೊಸ ಉದ್ಯೋಗಿಗಳನ್ನು ಕ್ಯಾಂಪಸ್‌ನಿಂದಲೇ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಜಾಗತಿಕ ಮಾನವ ಸಂಪನ್ಮೂಲ ಮುಖ್ಯಸ್ಥ ಮಿಲಿಂದ್ ಲಕ್ಕಾಡ್, 5 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಖಾಸಗಿ ವಲಯದ ಅತಿದೊಡ್ಡ ಸಂಸ್ಥೆ ಟಿಸಿಎಸ್, ಕಳೆದ ವರ್ಷ ಕ್ಯಾಂಪಸ್‌ಗಳಿಂದ 40,000 ಪದವೀಧರರನ್ನು ನೇಮಿಸಿಕೊಂಡಿತ್ತು. ಈ ಬಾರಿ ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಮಹಾಮಾರಿ ಕೋವಿಡ್‌ನಿಂದಾಗಿ ವಿಧಿಸಿರುವ ನಿರ್ಬಂಧಗಳು ಉದ್ಯೋಗಳನ್ನು ನೇಮಿಸಿಕೊಳ್ಳಲು ಅಡ್ಡಿಯಾಗುವುದಿಲ್ಲ. ಕಳೆದ ವರ್ಷ 3.60 ಲಕ್ಷ ಫ್ರೆಷರ್ಸ್ ವರ್ಚುವಲ್ ಮೂಲಕ ಪ್ರವೇಶ ಪರೀಕ್ಷೆ ಬರೆದಿದ್ದರು. ಭಾರತದಲ್ಲಿ ಕ್ಯಾಂಪಸ್‌ಗಳಿಂದಲೇ 40 ಸಾವಿರ ಮಂದಿಯನ್ನು ತೆಗೆದುಕೊಳ್ಳಲಾಗಿದ್ದು. ಈ ವರ್ಷ 40 ಸಾವಿರಕ್ಕೂ ಅಧಿಕ ಮಂದಿಯನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುತ್ತೇವೆ.
ಇದನ್ನೂ ಓದಿ: ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಬಂಪರ್: ಪ್ರತಿ ಉದ್ಯೋಗಿಯ ಖಾತೆ ಸೇರಿದ ಬೋನಸ್ ಎಷ್ಟು ಗೊತ್ತೇ?
ಅಂತೆಯೇ, ಕಳೆದ ವರ್ಷ ಅಮೆರಿಕದ ಕ್ಯಾಂಪಸ್‌ಗಳಿಂದ ನೇಮಕಗೊಂಡ 2,000 ಟ್ರೈನಿಗಳಿಂದಲೂ ಕಂಪನಿಯು ಉತ್ತಮ ಸಾಧನೆ ಮಾಡಲಿದೆ ಎಂದು ಅವರು ಹೇಳಿದರು. ಕ್ಯಾಂಪಸ್‌ಗಳಿಂದ ನೇಮಕ ಮಾಡಿಕೊಳ್ಳಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಲು 3 ತಿಂಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಗಣಪತಿ ಸುಬ್ರಮಣ್ಯಂ, ಭಾರತದಲ್ಲಿ ಪ್ರತಿಭೆಗಳ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ ಎಂದಿದ್ದು, ವೆಚ್ಚದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ದೇಶದ ಪ್ರತಿಭೆಗಳು ಕೌಶಲ್ಯ ಮತ್ತು ಕೆಲಸದಲ್ಲಿ ಅದ್ಭುತ ಎಂದಿದ್ದಾರೆ.