ನವದೆಹಲಿ: ಕೊನೇ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡಿ ರೈಲ್ವೆ ಪ್ರಯಾಣ ಮಾಡಿದ ಪ್ರಯಾಣಿಕರಿಂದ ರೈಲ್ವೆ ಇಲಾಖೆಗೆ ಕೋಟ್ಯಂತರ ರೂ. ಹಣ ಹರಿದು ಬಂದಿರುವ ವಿಚಾರ ಮಾಹಿತಿ ಹಕ್ಕು ಕಾಯ್ದೆ ಮೂಲಕ ತಿಳಿದು ಬಂದಿದೆ.
ದೇಶದ ಜನರ ಜೀವನಾಡಿ ಎಂದೇ ಕರೆಸಿಕೊಳ್ಳುವ ರೈಲು ಸಂಚಾರ, ತತ್ಕಾಲ್ ಹಾಗೂ ತತ್ಕಾಲ್ ಪ್ರೀಮಿಯಂ ಮೂಲಕ ಕಳೆದ ನಾಲ್ಕು ವರ್ಷದಲ್ಲಿ ಒಟ್ಟಾರೆ ₹25,392 ಕೋಟಿ ಹಣ ಗಳಿಸಿದೆ.
ಗಮನಿಸಿ... ಆನ್ಲೈನ್ ರೈಲು ಟಿಕೆಟ್ ಬುಕ್ಕಿಂಗ್ ಮತ್ತೆ ದುಬಾರಿ!
ತತ್ಕಾಲ್ ಕೋಟಾದಲ್ಲಿ ₹21,530 ಕೋಟಿ ಗಳಿಸಿದ್ದರೆ, ತತ್ಕಾಲ್ ಪ್ರೀಮಿಯಂನಲ್ಲಿ 3,862 ಕೋಟಿ ಹಣವನ್ನು 2016-19ರ ಅವಧಿಯಲ್ಲಿ ಸಂಪಾದಿಸಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಮಹಾರಾಷ್ಟ್ರ ಮೂಲದ ಆರ್ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ್ದ ಅರ್ಜಿಗೆ ರೈಲ್ವೆ ಇಲಾಖೆ ಉತ್ತರಿಸಿದ್ದು, ಈ ವೇಳೆ ತತ್ಕಾಲ್ ವ್ಯವಸ್ಥೆಯಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಇಲಾಖೆಗೆ ₹25,392 ಕೋಟಿ ಹಣ ಹರಿದು ಬಂದಿದೆ ಎನ್ನುವ ವಿಚಾರ ಬಹಿರಂಗವಾಗಿದೆ.
ಕೊನೆ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡಿ ಪ್ರಯಾಣಿಸುವವರಿಗಾಗಿ 1997ರಲ್ಲಿ ತತ್ಕಾಲ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. 2004ರಲ್ಲಿ ಈ ವ್ಯವಸ್ಥೆಯನ್ನು ದೇಶವ್ಯಾಪಿ ವಿಸ್ತರಿಸಲಾಗಿತ್ತು.