ನವದೆಹಲಿ: ಇಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ 44ನೇ ಸಭೆ ನಡೆಯಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಕೋವಿಡ್ -19 ಸಂಬಂಧಿತ ಅತ್ಯಾವಶ್ಯಕ ಮತ್ತು ಕಪ್ಪು ಶಿಲೀಂಧ್ರ ಔಷಧಿಗಳಿಗೆ ತೆರಿಗೆ ವಿನಾಯಿತಿ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಈ ಸಭೆಯಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್, ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಮತ್ತು ಹಿರಿಯ ಸಚಿವರು ಭಾಗವಹಿಸಲಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.
ವೈದ್ಯಕೀಯ ದರ್ಜೆಯ ಆಮ್ಲಜನಕ, ಆಕ್ಸಿಮೀಟರ್, ಹ್ಯಾಂಡ್ ಸ್ಯಾನಿಟೈಸರ್ ಮತ್ತು ವೆಂಟಿಲೇಟರ್‌ಗಳಂತಹ ಕೋವಿಡ್-19 ಪರಿಹಾರ ಸಾಮಗ್ರಿಗಳ ಮೇಲಿನ ಜಿಎಸ್‌ಟಿ ರಿಯಾಯಿತಿಗಳ ಕುರಿತು ಮೇಘಾಲಯ ಉಪಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಸಚಿವರ ತಂಡದ ವರದಿ ಬಗ್ಗೆ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಇದಲ್ಲದೆ, ಕೋವಿಡ್-19 ಚಿಕಿತ್ಸೆಗಾಗಿ ಲಸಿಕೆ, ಔಷಧ ಮತ್ತು ಸೋಂಕು ಪತ್ತೆಗಾಗಿ ಪರೀಕ್ಷಾ ಕಿಟ್‌ಗಳ ಮೇಲಿನ ತೆರಿಗೆ ವಿನಾಯಿತಿ ಬಗ್ಗೆ ಸಹ ಸಚಿವರ ತಂಡ ಪರಿಶೀಲಿಸಿದೆ. ಸರ್ಕಾರದಲ್ಲಿನ ಕೆಲವು ರಾಜ್ಯ ಹಣಕಾಸು ಮಂತ್ರಿಗಳು ಕೋವಿಡ್-19 ಅವಶ್ಯಕಗಳ ಮೇಲೆ ದರ ಕಡಿತಕ್ಕೆ ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಕೋವಿಡ್-19 ಎಸೆನ್ಷಿಯಲ್‌ಗಳಿಗೆ ದರಗಳನ್ನು ಶಿಫಾರಸು ಮಾಡಲು ಸಚಿವರ ತಂಡದ ಸಮಿತಿ ರಚಿಸಲಾಯಿತು.
ಕಾಂಗ್ರೆಸ್ ಪಕ್ಷ ಮತ್ತು ಇತರ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ಸರ್ಕಾರಗಳು ತೆರಿಗೆ ಕಡಿತಗೊಳಿಸುವಂತೆ ಒತ್ತಾಯಿಸುತ್ತಿವೆ. ಆದರೆ, ಈ ಕ್ರಮವು ಜನರಿಗೆ ಸ್ಪಷ್ಟವಾದ ಲಾಭ ತಂದುಕೊಡುವುದಿಲ್ಲ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಪ್ರಸ್ತುತ, ದೇಶೀಯವಾಗಿ ತಯಾರಿಸಿದ ಲಸಿಕೆಗಳ ಮೇಲೆ ಶೇ. 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಕೋವಿಡ್ -19 ಔಷಧಗಳು ಮತ್ತು ಆಮ್ಲಜನಕ ಸಾಂದ್ರಕಗಳಿಗೆ ಶೇ. 12ರಷ್ಟು ತೆರಿಗೆ ಇದೆ.
ಇದನ್ನೂ ಓದಿ: Watch: ನಿದ್ರೆಗೆ ಜಾರಿದ್ದ ನಾಯಿಯನ್ನ ಹೊತ್ತೊಯ್ದ ಚಿರತೆ