ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆಯಿಂದ ರೋಮ್‌ನಲ್ಲಿ ನಡೆಯಲಿರುವ ಜಿ-20 ಹಣಕಾಸು ಮತ್ತು ಆರೋಗ್ಯ ಸಚಿವರ ಜಂಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದು ಇತರ ವಿಷಯಗಳ ಜೊತೆಗೆ ಕೋವಿಡ್ ತಡೆಗಟ್ಟುವಿಕೆ ಬಗ್ಗೆ ಚರ್ಚಿಸಲಾಗುತ್ತದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹಣಕಾಸು ಸಚಿವಾಲಯ, ಕೋವಿಡ್ ಸಾಂಕ್ರಾಮಿಕ ತಡೆಗಟ್ಟುವಿಕೆ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಲು ರೋಮ್‌ನಲ್ಲಿ ನಡೆಯಲಿರುವ ಜಿ-20 ಜಂಟಿ ಹಣಕಾಸು ಮತ್ತು ಆರೋಗ್ಯ ಸಚಿವರ ಸಭೆಯಲ್ಲಿ ಭಾಗವಹಿಸಲು ನಿರ್ಮಲಾ ಸೀತಾರಾಮನ್ ಅಧಿಕೃತ ಭೇಟಿಯನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಿದೆ.
ಸೋಂಕಿನ ವೇಗಕ್ಕೆ ಬ್ರೇಕ್ ಹಾಕುವುದು ಮತ್ತು ಸಚಿವಾಲಯಗಳ ನಡುವೆ ಮತ್ತಷ್ಟು ಸಮನ್ವಯ ವ್ಯವಸ್ಥೆಗಳನ್ನು ಹೇಗೆ ನಿರ್ಮಿಸುವುದು ಎಂಬುದರ ಕುರಿತು ಹಣಕಾಸು ಮತ್ತು ಆರೋಗ್ಯ ಸಚಿವರು ಚರ್ಚಿಸುತ್ತಾರೆ.
ಇಟಲಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮೊದಲ ಜಂಟಿ ಸಭೆ ಇದಾಗಿದ್ದು, ಇಟಲಿಯ ಆರ್ಥಿಕ ಮತ್ತು ಹಣಕಾಸು ಸಚಿವ ಡೇನಿಯಲ್ ಫ್ರಾಂಕೊ, ಆರೋಗ್ಯ ಸಚಿವ ರಾಬರ್ಟೊ ಸ್ಪೆರಾನ್ಜಾ ಅಧ್ಯಕ್ಷತೆ ವಹಿಸಲಿದ್ದಾರೆ. ಅ.30 ರಂದು ರೋಮ್‌ನಲ್ಲಿ ನಡೆಯುತ್ತಿರುವ ಜಿ-20 ನಾಯಕರ ಶೃಂಗಸಭೆಗೂ ಮುನ್ನದಿನದಂದು ಸಭೆ ನಡೆಯಲಿದೆ.
ಜಗತ್ತಿನಾದ್ಯಂತ ಕೋವಿಡ್ ವಿರುದ್ಧ ಹೋರಾಡಲು ಅಂತಾರಾಷ್ಟ್ರೀಯ ಹಣಕಾಸಿನ ಅಗತ್ಯವಿದೆ. ಲಸಿಕೆ ಕಚ್ಚಾ ವಸ್ತುಗಳಿಗೆ ಪೂರೈಕೆ ಸರಪಳಿಗಳನ್ನು ತೆರೆದಿಡುವ ಅಗತ್ಯವನ್ನು ಈ ತಿಂಗಳ ಆರಂಭದಲ್ಲಿ ನಡೆದಿದ್ದ 36ನೇ ವಾರ್ಷಿಕ G-30 ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಸೆಮಿನಾರ್‌ನಲ್ಲಿ ನಿರ್ಮಲಾ ಸೀತಾರಾಮನ್ ಒತ್ತಿ ಹೇಳಿದ್ದರು.