ನವದೆಹಲಿ: ದೂರ ಸಂಪರ್ಕ ಇಲಾಖೆಗೆ (ಡಿಒಟಿ) ಕೆಲವು ಷರತ್ತು ವಿಧಿಸಿ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಸಂಬಂಧಿತ ಬಾಕಿ ಪಾವತಿಗೆ ವೊಡಾಫೋನ್- ಐಡಿಯಾ, ಭಾರ್ತಿ ಏರ್‌ಟೆಲ್ ಮತ್ತು ಟಾಟಾ ಟೆಲಿ ಸರ್ವೀಸಸ್ ಸೇರಿದಂತೆ ಇತರೆ ಟೆಲಿಕಾಂ ಸಂಸ್ಥೆಗಳಿಗೆ ಸುಪ್ರೀಂಕೋರ್ಟ್ 10 ವರ್ಷಗಳ ಕಾಲಾವಕಾಶ ನೀಡಿದೆ.
ಸರ್ಕಾರವು 20 ವರ್ಷಗಳ ಸಮಯ ಸೂಚಿಸಿತ್ತು. ಆದರೆ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ತುಂಬಾ ದೀರ್ಘವಾಗಲಿದೆ. ಹೀಗಾಗಿ 10 ವರ್ಷಗಳ ಕಾಲಾವಕಾಶ ಮಾತ್ರ ನೀಡಲಾಗುವುದು ಎಂದು ಇಂದು ತೀರ್ಪು ನೀಡಿದೆ.
2021ರ ಮಾರ್ಚ್ 31ರ ಒಳಗೆ ಟೆಲಿಕಾಂ ಕಂಪನಿಗಳು ಎಜಿಆರ್ ಸಂಬಂಧಿತ ಬಾಕಿ ಹಣವನ್ನು ಶೇ. 10ರಷ್ಟು ಪಾವತಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಟೆಲಿಕಾಂ ಕಂಪನಿಗಳು ನ್ಯಾಯಾಲಯದ ಆದೇಶದ ಪ್ರಕಾರ ಎಜಿಆರ್ ಬಾಕಿ ಪಾವತಿಸುವ ಹೊಣೆಗಾರಿಕೆ ಸಲ್ಲಿಸಬೇಕಾಗುತ್ತದೆ.
ಎಜಿಆರ್ ಸಂಬಂಧಿತ ಬಾಕಿ ಪಾವತಿಸಲು ವಿಫಲವಾದರೆ ದಂಡ, ಬಡ್ಡಿ ಮತ್ತು ನ್ಯಾಯಾಲಯದ ಆದೇಶ ತಿರಸ್ಕಾರಕ್ಕೆ ಒಳಗಾಗುಬೇಕಾಗುತ್ತದೆ ಎಂದು ಎಸ್‌ಸಿ ಎಚ್ಚರಿಕೆ ನೀಡಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಡಿಒಟಿ ಇರಿಸಿದ ಬೇಡಿಕೆ ಮತ್ತು ಈ ವಿಷಯದಲ್ಲಿ ಉನ್ನತ ನ್ಯಾಯಾಲಯ ನೀಡಿದ ತೀರ್ಪು ಅಂತಿಮವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಇತರ ಪ್ರಮುಖ ಅಂಶಗಳು:
ಬಾಕಿ ಪಾವತಿಗೆ ನಾಲ್ಕು ವಾರಗಳಲ್ಲಿ ಹೊಣೆಗಾರಿಕ ಅಥವಾ ವೈಯಕ್ತಿಕ ಖಾತರಿ ನೀಡಲು ಟಿಲಿಕಾಂ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು (ಎಂಡಿ) ಅಥವಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (ಸಿಇಒ) ನಿರ್ದೇಶನ ನೀಡಿದೆ.
ತೀರ್ಪು ನೀಡುವಾಗ ನ್ಯಾಯಪೀಠವು ಟೆಲಿಕಾಂಗಳಿಂದ ಕೊನೆಯ ಕಂತು ಪಾವತಿಸುವವರೆಗೆ ಅವರ ಬ್ಯಾಂಕ್ ಖಾತರಿಗಳನ್ನು ಡಿಒಟಿ ಅಡಿ ಇರಿಸಲಾಗುವುದು ಎಂದು ಹೇಳಿದೆ.
2021ರಿಂದ 2031ರವರೆಗೆ ಪ್ರತೀ ವರ್ಷ ಫೆಬ್ರವರಿ 7ರೊಳಗೆ ಎಜಿಆರ್ ವಾರ್ಷಿಕ ಕಂತು ಪಾವತಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಮಾರ್ಚ್ 31ರ ವೇಳೆಗೆ ಶೇ. 10ರಷ್ಟು ಪಾವತಿಗೆ ಸೂಚಿಸಿದೆ.
ದಿವಾಳಿತನ ಪ್ರಕ್ರಿಯೆ ಎದುರಿಸುತ್ತಿರುವ ಟೆಲಿಕಾಂ ಕಂಪನಿಗಳ ಸ್ಪೆಕ್ಟ್ರಮ್ ಮಾರಾಟದ ಸಮಸ್ಯೆಯನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ನಿರ್ಧರಿಸುತ್ತದೆ.
ಎಜಿಆರ್ ಸಂಬಂಧಿತ ಬಾಕಿ ಇರುವ ಸುಮಾರು 1.6 ಲಕ್ಷ ಕೋಟಿ ರೂ. ಪಾವತಿಸಲು ಟೈಮ್‌ಲೈನ್ ಸೇರಿದಂತೆ ಹಲವು ವಿಷಯಗಳ ಕುರಿತು ನ್ಯಾಯಪೀಠ ತನ್ನ ತೀರ್ಪು ನೀಡಿದೆ.