ನವದೆಹಲಿ : ಸಾಲ ನೀಡುವ ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಶೇಕಡಾ 6.95ಕ್ಕೆ ಏರಿಸಿರುವುದಾಗಿ ತಿಳಿಸಿದೆ. ಏಪ್ರಿಲ್ 1ರಿಂದ ಈ ಹೊಸ ನೀತಿ ಜಾರಿಗೆ ಬಂದಿದೆ.
ಈವರೆಗಿದ್ದ ಶೇ. 6.70ರಷ್ಟು ಕಡಿಮೆ ಬಡ್ಡಿ ದರವು ಮಾರ್ಚ್ 31ಕ್ಕೆ ಕೊನೆಗೊಂಡಿದೆ. 75 ಲಕ್ಷ ರೂ.ವರೆಗಿನ ಗೃಹ ಸಾಲಗಳಿಗೆ ಶೇ. 6.70ರಷ್ಟು ಬಡ್ಡಿದರದಲ್ಲಿ ಹಾಗೂ 75 ಲಕ್ಷ ರೂ.ನಿಂದ 5 ಕೋಟಿವರೆಗೆ ಶೇ.6.75ರಷ್ಟು ಬಡ್ಡಿದರದಲ್ಲಿ ಸೀಮಿತ ಅವಧಿವರೆಗೆ ಗೃಹ ಸಾಲ ನೀಡುವುದಾಗಿ ಎಸ್‌ಬಿಐ ತಿಳಿಸಿತ್ತು. ಆದರೆ, ಏ.1ರಿಂದ ಹೊಸ ಬಡ್ಡಿ ದರ (6.95) ಜಾರಿಗೆ ಬಂದಿದೆ. ಸೀಮಿತ ಅವಧಿಯ ದರಕ್ಕೆ ಹೋಲಿಸಿದರೆ ಇದು 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ವಹಿವಾಟು ಕುಸಿತ: ಹೂಡಿಕೆದಾರರಿಗೆ 4.54 ಲಕ್ಷ ಕೋಟಿ ರೂ. ನಷ್ಟ
ಗೃಹ ಸಾಲಗಳ ಮೇಲೆ ಬ್ಯಾಂಕ್ ಸಂಸ್ಕರಣಾ ಶುಲ್ಕ ಕೂಡ ವಿಧಿಸಲು ನಿರ್ಧರಿಸಿದೆ. ಇದು ಸಾಲದ ಮೊತ್ತದ ಶೇ.0.40ರಷ್ಟು ಮತ್ತು ಕನಿಷ್ಠ 10,000 ರೂ. ಮತ್ತು ಗರಿಷ್ಠ 30,000 ರೂ.ವರೆಗಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಒಳಗೊಂಡಿರುತ್ತದೆ. ಕಳೆದ ತಿಂಗಳು ಸಂಸ್ಕರಣಾ ಶುಲ್ಕ ಮನ್ನಾ ಮಾಡಿ ಎಸ್‌ಬಿಐ ಗ್ರಾಹಕರಿಗೆ ಶುಭ ಸುದ್ದಿ ನೀಡಿತ್ತು.
ಎಸ್‌ಬಿಐಯನ್ನು ಮಾದರಿಯಾಗಿ ತೆಗೆದುಕೊಂಡ ಕೊಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಮತ್ತು ಹೆಚ್‌ಡಿಸಿ ಸೇರಿ ಕೆಲ ಖಾಸಗಿ ಬ್ಯಾಂಕ್ಗಳೂ ಕೂಡ ತಮ್ಮ ಗೃಹ ಸಾಲ ಬಡ್ಡಿ ದರ ಕಡಿಮೆ ಮಾಡಿತ್ತು.