ಮುಂಬೈ: ಕೋವಿಡ್ ರೂಪಾಂತರಿ ಹೊಸ ತಳಿ ಒಮಿಕ್ರೋನ್ ಷೇರು ಮಾರುಕಟ್ಟೆಯನ್ನು ಮತ್ತಷ್ಟು ಅಲುಗಾಡಿಸಿದೆ. ಇದು ರೂಪಾಯಿ ಮೇಲೂ ನಕಾರಾತ್ಮಕ ಪರಿಣಾಮ ಬೀರಿದೆ.
ಹೂಡಿಕೆದಾರರು ತಮ್ಮ ಇಕ್ವಿಟಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿದ್ದರಿಂದ ಡಾಲರ್ ಮುಂದೆ ರೂಪಾಯಿ ದರ ತಿಂಗಳಲ್ಲಿಯೇ ಕನಿಷ್ಠ ಇಳಿಕೆ ಕಂಡಿದೆ.
ಸೋಮವಾರದ ವಹಿವಾಟಿನಲ್ಲಿ ರೂಪಾಯಿ ದರ ಡಾಲರ್ ಮುಂದೆ 5 ಪೈಸೆ ಏರಿಕೆ ಕಂಡು 74.84 ರಷ್ಟಿತ್ತು. ಒಂದು ಹಂತದಲ್ಲಿ 74.82 ರಷ್ಟು ಗರಿಷ್ಠ ಮಟ್ಟಕ್ಕೆ ತಲುಪಿದೆ. ಆದರೆ, ಷೇರು ಮಾರುಕಟ್ಟೆಯಲ್ಲಾದ ದಿಢೀರ್ ಬದಲಾವಣೆಯಿಂದ ರೂಪಾಯಿ ದರ ಡಾಲರ್ ಎದುರು ಏಕಾಏಕಿ 74.98ಕ್ಕೆ ಕುಸಿತ ಕಂಡು ಕನಿಷ್ಠ ದರ ದಾಖಲಿಸಿತು.
ಕಳೆದ ಶುಕ್ರವಾರ ಡಾಲರ್ ಎದುರು 37 ಪೈಸೆ ಇಳಿಕೆ ಕಂಡಿದ್ದ ರೂಪಾಯಿ 74.89 ರಷ್ಟು ವಹಿವಾಟು ನಡೆಸಿತ್ತು. ಇಂದು(ಸೋಮವಾರ) ಅದು ಇನ್ನಷ್ಟು ಕಳಪೆ ವಹಿವಾಟಿನೊಂದಿಗೆ 74.98ಕ್ಕೆ ಬಂದು ತಲುಪಿದೆ.
ಯುರೋಪ್‌ನಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಒಮಿಕ್ರೋನ್ ತಳಿಯ ಭೀತಿಯಿಂದ ಹೂಡಿಕೆದಾರರು ಏಕಾಏಕಿ ಷೇರುಗಳ ಮಾರಾಟಕ್ಕೆ ಇಳಿದಿದ್ದರಿಂದ ಡಾಲರ್ ಸೂಚ್ಯಂಕವು 0.19 ರಷ್ಟು ಏರಿಕೆ ಕಂಡು ಅದು 96.27 ತಲುಪಿದೆ.
ಏತನ್ಮಧ್ಯೆ, ಜಾಗತಿಕ ತೈಲ ದರ ಪ್ರತಿ ಬ್ಯಾರೆಲ್ಗೆ ಶೇ.4.06 ರಷ್ಟು ಏರಿಕೆಯಾಗಿ 75.67 ಡಾಲರ್ ವಹಿವಾಟು ದಾಖಲಿಸಿದೆ.