ನವದೆಹಲಿ: ಭಾರತದ ಗರಿಷ್ಠ ಮುಖಬೆಲೆಯ ಕರೆನ್ಸಿ ನೋಟು ಕಡಿಮೆಯಾಗಿದ್ದರೂ ಕಳೆದ ಎರಡು ವರ್ಷಗಳಲ್ಲಿ 2,000 ರೂ. ಕರೆನ್ಸಿ ನೋಟು ಮುದ್ರಣ ಮಾಡಿಲ್ಲ ಎಂದು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು, 2018ರ ಮಾರ್ಚ್ 30ರಂದು 2000 ರೂ. ಮುಖಬೆಲೆ 3,362 ಮಿಲಿಯನ್ ಕರೆನ್ಸಿ ನೋಟುಗಳು ಚಲಾವಣೆಯಲ್ಲಿದ್ದವು. ಮೌಲ್ಯ ಮತ್ತು ವ್ಯಾಪಾರದ ದೃಷ್ಟಿಯಿಂದ ಶೇ 3.27 ಮತ್ತು 37.26ರಷ್ಟು ಕರೆನ್ಸಿ ಹೊಂದಿದ್ದಾಗಿ ತಿಳಿಸಿದರು.
2021ರ ಫೆಬ್ರವರಿ 26ರ ವೇಳೆಗೆ 2,000 ರೂ. ಮುಖಬೆಲೆಯ 2,499 ಮಿಲಿಯನ್ ತುಣುಕುಗಳು ಚಲಾವಣೆಯಲ್ಲಿದ್ದು, ಕ್ರಮವಾಗಿ ಪ್ರಮಾಣ ಮತ್ತು ಮೌಲ್ಯದ ಪ್ರಕಾರ ಶೇ 2.01ರಷ್ಟು ಮತ್ತು ಶೇ 17.78ರಷ್ಟು ನೋಟುಗಳಿವೆ.
ನಿರ್ದಿಷ್ಟ ಗುಂಪಿನ ನೋಟುಗಳ ಮುದ್ರಣವನ್ನು ಸಾರ್ವಜನಿಕರ ವಹಿವಾಟಿನ ಬೇಡಿಕೆಗೆ ಅನುಕೂಲವಾಗುವಂತೆ ಅಪೇಕ್ಷಿತ ಗ್ರೂಪ್ನ ಮಿಶ್ರಣ ಕಾಪಾಡಿಕೊಳ್ಳಲು ಆರ್‌ಬಿಐಯೊಂದಿಗೆ ಸಮಾಲೋಚಿಸಿ ಸರ್ಕಾರ ನಿರ್ಧರಿಸುತ್ತದೆ.
2019-20 ಮತ್ತು 2020-21ರ ಅವಧಿಯಲ್ಲಿ 2000 ರೂ. ಮುಖಬೆಲೆಯ ನೋಟುಗಳ ಮುದ್ರಣಕ್ಕಾಗಿ ಮುದ್ರಣಾಲಯಗಳೊಂದಿಗೆ ಯಾವುದೇ ನಿರ್ದಿಷ್ಟ ಗುರುತು (ಇಂಡೆಂಟ್) ಇರಿಸಿಕೊಳ್ಳಲಿಲ್ಲ ಎಂದು ಹೇಳಿದರು.
2016-17ರ ಆರ್ಥಿಕ ವರ್ಷದಲ್ಲಿ (2016ರ ಏಪ್ರಿಲ್ನಿಂದ 2017ರ ಮಾರ್ಚ್ವರೆಗೆ) 2,000 ರೂ.ಯ 3,542.991 ಮಿಲಿಯನ್ ನೋಟುಗಳನ್ನು ಮುದ್ರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2019ರಲ್ಲಿ ತಿಳಿಸಿತ್ತು.
ಇದನ್ನೂ ಓದಿ: ಕೊರೊನಾ ವರ್ಷದಲ್ಲಿ ಕಾರ್ಪೊರೇಟ್ ಧನಿಕರಿಗಿಂತ ಕೌಟುಂಬಿಕ ದೇಣಿಗೆ ಅತ್ಯಧಿಕ: ವರದಿ
2017-18ರಲ್ಲಿ ಕೇವಲ 111.507 ಮಿಲಿಯನ್ ನೋಟುಗಳನ್ನು ಮಾತ್ರ ಮುದ್ರಿಸಲಾಗಿದ್ದು, ಇದು 2018-19ನೇ ಸಾಲಿನಲ್ಲಿ 46.690 ಮಿಲಿಯನ್ ನೋಟುಗಳಿಗೆ ಇಳಿದಿದೆ. 2019ರ ಏಪ್ರಿಲ್ನಿಂದ ಹೊಸ 2,000 ರೂ. ಕರೆನ್ಸಿ ನೋಟುಗಳನ್ನು ಮುದ್ರಿಸಿಲ್ಲ. ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳ ಸಂಗ್ರಹಿಸುವುದನ್ನು ತಡೆಯುವ ಪ್ರಯತ್ನ ಮತ್ತು ಕಪ್ಪು ಹಣನಿಗ್ರಹಿಸುವ ಇರಾದೆ ಇದರ ಹಿಂದಿದೆ.
ಕಪ್ಪು ಹಣ ಮತ್ತು ನಕಲಿ ಕರೆನ್ಸಿಗಳನ್ನು ತಡೆಯುವ ಪ್ರಯತ್ನವಾಗಿ ಕೇಂದ್ರ ಸರ್ಕಾರ 500 ಮತ್ತು 1,000 ರೂ ನೋಟುಗಳನ್ನು ಹಿಂತೆಗೆದುಕೊಂಡ ಕೂಡಲೇ 2016ರ ನವೆಂಬರ್‌ನಲ್ಲಿ 2,000 ರೂ. ನೋಟುಗಳನ್ನು ಪರಿಚಯಿಸಿತ್ತು.
ಹೊಸ 500 ರೂ. ನೋಟು ಮುದ್ರಿಸಿದ ಬಳಿಕ 1,000 ರೂ. ಕರೆನ್ಸಿ ನೋಟುಗಳನ್ನು ನಿಲ್ಲಿಸಲಾಯಿತು. ಬದಲಾಗಿ 2,000 ರೂ. ನೋಟು ಪರಿಚಯಿಸಲಾಯಿತು. 2000 ರೂ. ಅಲ್ಲದೆ, ಚಲಾವಣೆಯಲ್ಲಿ ಇರುವ ಇತರ ಕರೆನ್ಸಿ ನೋಟುಗಳು 10, 20 50 ಮತ್ತು 100 ರೂ. ಆಗಿವೆ.