ನವದೆಹಲಿ: ಚಿಲ್ಲರೆ ವ್ಯಾಪಾರಿಗಳು 2020ರ ಜುಲೈ ಮಾಸಿಕದ ಮೊದಲಾರ್ಧದ ವಹಿವಾಟಿನಲ್ಲಿ 64 ಪ್ರತಿಶತದಷ್ಟು ಬೆಳವಣಿಗೆಯನ್ನು ಅಂದಾಜಿಸಿದ್ದಾರೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಭಾರತೀಯ ಚಿಲ್ಲರೆ ಉದ್ಯಮವು ರಾಜ್ಯಗಳು ಮತ್ತು ಸ್ಥಳೀಯ ಮಟ್ಟದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸುತ್ತಿದೆ. ಹೀಗಾಗಿ, ಬೆಳವಣಿಗೆಯ ಆವೇಗಕ್ಕೆ ಹಿನ್ನಡೆ ಆಗುತ್ತಿದೆ ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.
ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಲಾಕ್‌ಡೌನ್ ಜಾರಿಯಲ್ಲಿದೆ. ರಿಟೇಲ್ ವರ್ತಕರು ಸರಕುಗಳ ಪೂರೈಕೆ ಮತ್ತು ಕೆಲಸಗಾರರ ಕೊರತೆ ಎದುರಿಸುತ್ತಿದ್ದಾರೆ. ಹೀಗಾಗಿ ವಹಿವಾಟಿನಲ್ಲಿ ಇಳಿಕೆ ಆಗಲಿದೆ ಎಂದು ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತಿಳಿಸಿದೆ.
ಚಿಲ್ಲರೆ ವ್ಯಾಪಾರಿಗಳ ಸಂಘ (ಆರ್‌ಎಐ) ನಡೆಸಿದ ವ್ಯಾಪಾರ ಸಮೀಕ್ಷೆಯ ನಾಲ್ಕನೇ ಆವೃತ್ತಿಯ ಪ್ರಕಾರ, ಆಹಾರ ಮತ್ತು ದಿನಸಿ ಹಾಗೂ ಗ್ರಾಹಕ ಬಾಳಿಕೆಯಂತಹ ಕೆಲವು ವಿಭಾಗಗಳು ಒಟ್ಟಾರೆ ಬೆಳವಣಿಗೆಯೊಂದಿಗೆ ಕೆಲವು ಸುಧಾರಣೆಯ ಲಕ್ಷಣಗಳನ್ನು ತೋರಿಸಲಾರಂಭಿಸಿವೆ.
ಗ್ರಾಹಕ ಬಾಳಿಕೆ ಬರುವ ವಿಭಾಗದಲ್ಲಿ ದೊಡ್ಡ ಗಾತ್ರದ ಚಿಲ್ಲರೆ ವ್ಯಾಪಾರಿಗಳು (300 ಕೋಟಿ ರೂ.ಗಳಿಗಿಂತ ಹೆಚ್ಚಿನ ಮಾರಾಟ) ಶೇ- 21ರಷ್ಟು ಬೆಳವಣಿಗೆ ಸೂಚಿಸಿದರೆ ಆಹಾರ ಮತ್ತು ಕಿರಾಣಿ ಮಳಿಗೆಗಳಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಚಿಲ್ಲರೆ ವ್ಯಾಪಾರ (300 ಕೋಟಿ ರೂ.ಗಿಂತ ಕಡಿಮೆ ಮಾರಾಟ) ಶೇ 35ರಷ್ಟು ಬೆಳವಣಿಗೆ ಕುಸಿಯಲಿದೆ ಎಂದು ಅಂದಾಜಿಸಿದೆ.
ಕೋವಿಡ್–19 ನಿಯಂತ್ರಿಸಲು ಸ್ಥಳೀಯವಾಗಿ ಲಾಕ್‌ಡೌನ್ ವಿಧಿಸುತ್ತಿರುವುದು ಗೊಂದಲಕ್ಕೆ ಕಾರಣವಾಗುತ್ತಿದ್ದು, ಇದರಿಂದ ಸರಕುಗಳ ಪೂರೈಕೆಗೆ ಅಡಚಣೆ ಆಗಿದೆ. ಕೆಲಸಗಾರರು ಸಿಗುತ್ತಿಲ್ಲ ಎಂದು ಒಕ್ಕೂಟವು ತನ್ನ ನಾಲ್ಕನೇ ಆವೃತ್ತಿಯ ಸಮೀಕ್ಷೆಯಲ್ಲಿ ತಿಳಿಸಿದೆ.