ನವದೆಹಲಿ: ಏಪ್ರಿಲ್ ಮೊದಲ ಮೂರು ವಾರಗಳಲ್ಲಿ ರಸಗೊಬ್ಬರ ಮಾರಾಟವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೀವ್ರ ಏರಿಕೆ ಕಂಡಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ಅಧಿಕೃತ ಮಾಹಿತಿ ತಿಳಿಸುತ್ತದೆ.
"ಏಪ್ರಿಲ್ 1ರಿಂದ 22ರವರೆಗೆ, ರೈತರಿಗೆ ರಸಗೊಬ್ಬರಗಳ ಮಾರಾಟವು 10.63 ಲಕ್ಷ ಟನ್ ಆಗಿದ್ದು, ಇದು ಕಳೆದ ವರ್ಷದ ಮಾರಾಟಕ್ಕಿಂತ 32% ಹೆಚ್ಚಾಗಿದೆ" ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈತರಿಗೆ ಪೂರೈಕೆಯಾದ ರಸಗೊಬ್ಬರದ ಪ್ರಮಾಣ ಕಳೆದ ವರ್ಷದ ಇದೇ ಅವಧಿಯಲ್ಲಿ ಸುಮಾರು 8.02 ಲಕ್ಷ ಟನ್‌ಗಳಷ್ಟು ಇತ್ತು.
ಅಗತ್ಯ ಸೇವೆಗಳಲ್ಲಿ ಕೃಷಿ ಚಟುವಟಿಕೆ ಸೇರಿಸಿರುವುದರಿಂದ ರೈತರಿಗೆ ಕೃಷಿ ಚಟುವಟಿಕೆಯನ್ನು ಮುಂದುವರೆಸಲು ಅವಕಾಶ ಸಿಕ್ಕಿದೆ. ಲಾಕ್‌ಡೌನ್ ಇದರ ಮೇಲೆ ಪರಿಣಾಮ ಬೀರಲಿಲ್ಲ.
"ಲಾಕ್‌ಡೌನ್ ಹೊರತಾಗಿಯೂ, ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳು ನಡೆಸಿದ ಪ್ರಯತ್ನದಿಂದಾಗಿ ದೇಶದಲ್ಲಿ ರಸಗೊಬ್ಬರಗಳ ಉತ್ಪಾದನೆ ಮತ್ತು ಪೂರೈಕೆ ಯಾವುದೇ ತೊಂದರೆಯಿಲ್ಲದೆ ನಡೆಯುತ್ತಿದೆ" ಎಂದು ರಸಗೊಬ್ಬರ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
ಕೋವಿಡ್-19 ತಪ್ಪಿಸಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದ್ದು, ರಸಗೊಬ್ಬರಗಳನ್ನು ಲೋಡ್, ಅನ್ಲೋಡ್ ಮಾಡುವಾಗ ಹಾಗೂ ಸಾಗಿಸುವಾಗ ಕಾರ್ಮಿಕರಿಗೆ ಮತ್ತು ಇತರ ಎಲ್ಲಾ ಸಿಬ್ಬಂದಿಗೆ ಮಾಸ್ಕ್ ಹಾಗೂ ಇತರ ಸಾಧನಗಳನ್ನು ಒದಗಿಸಲಾಗಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ.
ಕೋವಿಡ್-19 ಸೋಂಕಿನಿಂದ ಉಂಟಾದ ಆರ್ಥಿಕ ಹಿಂಜರಿತದ ಅವಧಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಎದುರಾಗದು. ದೇಶದಲ್ಲಿ ಆಹಾರ ಧಾನ್ಯಗಳ ಕೊರತೆಯಿಲ್ಲ ಮತ್ತು ಭವಿಷ್ಯದಲ್ಲಿಯೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.