ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಎನಿಡೆಸ್ಕ್ ಎಂಬ ರಿಮೋಟ್ ಡೆಸ್ಕ್‌ಟಾಪ್ ಆ್ಯಪ್ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡಿದ್ದು, ಇದು ಬಳಕೆದಾರರ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುತ್ತಿದ್ದು ಡೌನ್‌ಲೋಡ್ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದೆ.
ಎಚ್‌ಡಿಎಫ್‌ಸಿ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಮತ್ತು ಇತರ ಬ್ಯಾಂಕ್ಗಳ ಗ್ರಾಹಕರು ಯುಪಿಐ ಮೂಲಕ ಪಾವತಿ- ಸ್ವೀಕೃತಿ ಸೇವೆ ಪಡೆಯುವಾಗ ಎನಿಡೆಸ್ಕ್ ಆ್ಯಪ್ ಮೋಸಗೊಳಿಸುತ್ತಿದೆ ಎಂದು ದೂರು ನೀಡಿ ಬ್ಯಾಂಕ್ಗಳ ಗಮನಕ್ಕೆ ತಂದಿದ್ದರು.
ಪ್ಲೇಸ್ಟೋರ್ ಮತ್ತು ಆ್ಯಪ್ ಸ್ಟೋರ್ನಲ್ಲಿರುವ ಎನಿಡೆಸ್ಕ್ ಅನ್ನು ಡೌನ್‌ಲೋಡ್ ಮಾಡುವುದರಿಂದ ಅಪಾಯಗಳಿವೆ. ಹ್ಯಾಕರ್‌ಗಳು ಈ ಆ್ಯಪ್ ಅನ್ನು ತಮ್ಮ ನಿಯಂತ್ರಣಕ್ಕೆ ಪಡೆದು ಗ್ರಾಹಕರ ಬ್ಯಾಂಕ್ ಖಾತೆಗಳು ಹಾಗೂ ಇ-ವ್ಯಾಲೆಟ್‌ಗಳನ್ನು ದೋಚುತ್ತಿದ್ದಾರೆ ಎಂದು ಆರ್ಬಿಐ ಎಚ್ಚರಿಸಿದೆ.
ಎನಿಡೆಸ್ಕ್ ಒಂದು ರಿಮೋಟ್ ನಿಯಂತ್ರಿತ ಅಪ್ಲಿಕೇಷನ್. ಒಂದು ಪ್ರದೇಶದಲ್ಲಿರುವ ಕಂಪ್ಯೂಟರ್ ಅಥವಾ ಇತರೆ ಸಾಧನದಲ್ಲಿನ ಸಮಸ್ಯೆ ಸರಿಪಡಿಸಲು ಇನ್ನೆಲ್ಲೋ ಇರುವ ತಜ್ಞರು ಕಂಟ್ರೋಲ್ ಪಡೆಯಲು ಈ ತಂತ್ರಾಂಶ ಸಹಾಯಕವಾಗುತ್ತದೆ. ಈಗ ಇದೇ ಆ್ಯಪ್ ಹ್ಯಾಕರ್‌ಗಳು ಗ್ರಾಹಕರ ಖಾತೆಗೆ ಕನ್ನಾ ಹಾಕಲು ಬಳಸಿಕೊಳ್ಳುತ್ತಿದ್ದಾರೆ.
ಎನಿಡೆಸ್ಕ್ ಡೌನ್‌ಲೋಡ್ ಮಾಡಿಕೊಂಡ ಮೇಲೆ ಆ್ಯಪ್ ನೀಡುವ 9 ಅಂಕಿಗಳ ಕೋಡ್ ಅನ್ನು ಕಳುಹಿಸುವಂತೆ ಗ್ರಾಹಕರನ್ನು ಹ್ಯಾಕರ್‌ಗಳು ದುಂಬಾಲು ಬೀಳುತ್ತಾರೆ. ಆ ನಂಬರ್ ಸಿಕ್ಕ ಬಳಿಕ ಗ್ರಾಹಕರ ಸಾಧನದ ಮೇಲೆ ನಿಯಂತ್ರಣ ಸಾಧಿಸುವ ಹ್ಯಾಕರ್‌ಗಳು ಬ್ಯಾಂಕ್ ಖಾತೆ ಹಾಗೂ ಇ- ವ್ಯಾಲೆಟ್ಗಳಿಗೆ ಕನ್ನಾ ಹಾಕುತ್ತಾರೆ ಎಂದು ಆರ್ಬಿಐ ವಿವರಿಸಿದೆ.