ಮುಂಬೈ: ಸಾಲದ ಕೊರತೆ ಎದುರಿಸುತ್ತಿರುವ ವಲಯಗಳಿಗೆ ಉತ್ತಮ ಸಾಲ ಪ್ರಯೋಜನದ ಸುಲಭ ಪ್ರವೇಶಾತಿ ಹಾಗೂ ದುರ್ಬಲ ವರ್ಗಗಳು, ಸಣ್ಣ ಮತ್ತು ಹಿಡುವಳಿ ರೈತರಿಗೆ ಸಾಲ ಪ್ರಮಾಣ ಹೆಚ್ಚಿಸಲು ಆದ್ಯತೆಯ ವಲಯದ ಸಾಲಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಆರ್ಬಿಐನ ನೂತನ ಉತ್ತೇಜಕ ಕ್ರಮವು ನವೀಕರಿಸಬಹುದಾದ ಇಂಧನ ಮತ್ತು ಆರೋಗ್ಯ ಮೂಲಸೌಕರ್ಯಗಳಿಗೆ ಸಾಲದ ಪ್ರಮಾಣ ಹೆಚ್ಚಿಸಲಿದೆ.
50 ಕೋಟಿ ರೂ. ತನಕ ಸ್ಟಾರ್ಟ್ಅಪ್ಗಳಿಗೆ ಬ್ಯಾಂಕ್ಗಳು ಹಣಕಾಸು ನೆರವು ಒದಗಿಸಲಿವೆ. ಆದ್ಯತಾ ವಲಯದ ಅಡಿಯಲ್ಲಿ ಹಣಕಾಸಿನ ಅರ್ಹ ಹೊಸ ವಿಭಾಗದಲ್ಲಿ ಗ್ರಿಡ್ ಸಂಪರ್ಕಿತ ಕೃಷಿ ಪಂಪ್ ಸೌರ ವಿದ್ಯುತ್ ಪ್ಲಾಂಟ್ ಸ್ಥಾಪನೆಗೆ ಹಾಗೂ ಸಂಕುಚಿತ ಜೈವಿಕ ಅನಿಲ (ಸಿಬಿಜಿ) ಸ್ಥಾವರಗಳನ್ನು ಸ್ಥಾಪಿಸಲು ಸಾಲ ನೀಡಿಕೆಗಳನ್ನು ಸೇರಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಆದ್ಯತೆಯ ವಲಯದ ಸಾಲದ ಹರಿವಿನ ಪ್ರಾದೇಶಿಕ ಅಸಮಾನತೆ ನಿವಾರಿಸಲು ಹಾಗೂ ಸಾಲದ ಹರಿವಿನ ತುಲನಾತ್ಮಕತೆ ಕಡಿಮೆ ಇರುವ ಜಿಲ್ಲೆಗಳನ್ನು ಗುರುತಿಸಿ ಸಾಲದ ಪ್ರಮಾಣ ಹೆಚ್ಚಿಸಿ ನಿಗದಿಪಡಿಸಲಾಗಿದೆ.
ಸಣ್ಣ ಮತ್ತು ಅತಿಸಣ್ಣ ರೈತರು ಮತ್ತು ದುರ್ಬಲ ವರ್ಗದವರಿಗೆ ನಿಗದಿಪಡಿಸಿದ ಗುರಿಗಳನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತಿದೆ. ರೈತ ಉತ್ಪಾದಕರ ಸಂಸ್ಥೆಗಳು ಮತ್ತು ರೈತರು ತಮ್ಮ ಉತ್ಪನ್ನಗಳ ಬೆಲೆಯನ್ನು ಮೊದಲೇ ನಿರ್ಧರಿಸಿ ಮಾರುಕಟ್ಟೆಗೆ ತರುವ ಕೃಷಿಕ ನಿರ್ಧಾರ ಕೈಗೊಳ್ಳುವ ಕಂಪನಿಗಳಿಗೆ ಹೆಚ್ಚಿನ ಸಾಲ ಮಿತಿ ನಿರ್ದಿಷ್ಟಪಡಿಸಲಾಗಿದೆ. ನವೀಕರಿಸಬಹುದಾದ ಇಂಧನದ ಸಾಲದ ಮಿತಿ, ಆರೋಗ್ಯ ಮೂಲಸೌಕರ್ಯಗಳ ಸುಧಾರಣೆ, ಆಯುಷ್ಮಾನ್ ಭಾರತ್ ಸೇರಿದಂತೆ ಆರೋಗ್ಯ ಮೂಲಸೌಕರ್ಯಗಳ ಸಾಲ ಮಿತಿ ದ್ವಿಗುಣಗೊಳಿಸಲಾಗಿದೆ.