ಮುಂಬೈ: ಪದೇಪದೆ ಮರುಕಳಿಸುತ್ತಿರುವ ಆನ್ಲೈನ್ ವಂಚನೆಗಳನ್ನು ಪ್ರಸ್ತಾಪಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ), ಡಿಜಿಟಲ್ ಪಾವತಿಗಳ ಸುರಕ್ಷಾ ಮತ್ತು ನಿರ್ಭಯ ಬಳಕೆಯ ಬಗ್ಗೆ ತಮ್ಮೆಲ್ಲ ಬಳಕೆದಾರರಿಗೆ ಬಹುಭಾಷೆಯ ಎಸ್‌ಎಂಎಸ್ ಮತ್ತು ಜಾಹೀರಾತುಗಳ ಮೂಲಕ ತಿಳಿವಳಿಕೆಯ ಅಭಿಯಾನ ಕೈಗೊಳ್ಳುವಂತೆ ಪಾವತಿ ವ್ಯವಸ್ಥೆಗಳ ನಿರ್ವಾಹಕರಿಗೆ ನಿರ್ದೇಶನ ನೀಡಿದೆ.
ನಿಮಗೆ ತಿಳಿದಿರುವಂತೆ ಡಿಜಿಟಲ್ ವಹಿವಾಟಿನ ಸುರಕ್ಷತೆ ಮತ್ತು ನಿರ್ಭೀತ ವಹಿವಾಟು ಅತ್ಯಂತ ಮಹತ್ವದ್ದಾಗಿದೆ. ರಿಸರ್ವ್ ಬ್ಯಾಂಕ್ ತನ್ನ ಇ-ಬಾಟ್ (e-BAAT) ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಿದೆ. ಡಿಜಿಟಲ್ ಪಾವತಿ ವಿಧಾನಗಳ ಸುರಕ್ಷಿತ ಬಳಕೆಯ ಕುರಿತು ಅಭಿಯಾನಗಳನ್ನು ಆಯೋಜಿಸುತ್ತಿದೆ. ಈ ಮೂಲಕ ಪಿನ್, ಒಟಿಪಿ, ಪಾಸ್‌ವರ್ಡ್‌ಗಳಂತಹ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಅಭಿಯಾನಗಳ ಹೊರತಾಗಿಯೂ ಸಂಭವನೀಯ ಡಿಜಿಟಲ್ ವಂಚನೆಗಳು ಬಳಕೆದಾರರಿಗೆ ಬೆದರಿಕೆಯಾಗುತ್ತಿವೆ. ಪ್ರಮುಖ ಪಾವತಿ ಮಾಹಿತಿ ಬಹಿರಂಗಪಡಿಸಲು ಆಮಿಷ ಒಡ್ಡುವುದು, ಸಿಮ್ ಕಾರ್ಡ್‌ಗಳ ವಿನಿಮಯ, ಸಂದೇಶ ಮತ್ತು ಮೇಲ್‌ಗಳಲ್ಲಿ ಸ್ವೀಕರಿಸಿದ ಲಿಂಕ್‌ಗಳನ್ನು ತೆರೆಯುವುದು ಸೇರಿದೆ ಎಂದು ಉದಾಹರಣೆ ಸಹಿತ ಎಚ್ಚರಿಕೆ ನೀಡಿದೆ.
ಎಲ್ಲಾ ಪಾವತಿ ವ್ಯವಸ್ಥೆಗಳ ನಿರ್ವಾಹಕರು ಮತ್ತು ಪಾಲುದಾರರು, ಬ್ಯಾಂಕ್ಗಳು ಮತ್ತು ಬ್ಯಾಂಕೇತರರು ಡಿಜಿಟಲ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಮುಂದುವರಿಸಬೇಕಿದೆ. ಇದನ್ನು ಇನ್ನಷ್ಟು ಬಲಪಡಿಸುವುದು ಅತ್ಯಗತ್ಯ ಎಂದು ತಿಳಿಸಿದೆ.
ಎಲ್ಲಾ ಅಧಿಕೃತ ಪಾವತಿ ವ್ಯವಸ್ಥೆಗಳ ನಿರ್ವಾಹಕರು ಮತ್ತು ಪಾಲುದಾರರು ಡಿಜಿಟಲ್ ಪಾವತಿಗಳ ಸುರಕ್ಷಿತ ಮತ್ತು ನಿರ್ಭೀತಿ ಬಳಕೆಯ ಬಗ್ಗೆ ತಮ್ಮ ಬಳಕೆದಾರರಿಗೆ ತಿಳಿಸಲು ಎಸ್‌ಎಂಎಸ್, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿನ ಜಾಹೀರಾತುಗಳನ್ನು ಬಹುಭಾಷಾ ಅಭಿಯಾನಗಳ ಮೂಲಕ ಕೈಗೊಳ್ಳಬೇಕು ಎಂದು ಸೂಚಿಸಿದೆ.