ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷವನ್ನು ಬಿತ್ತರಿಸುವಂತಹ, ಬೆದರಿಕೆಗಳನ್ನು ಒಡ್ಡುವಂತಹ ಚಟುವಟಿಕೆಗಳನ್ನು ನಿಲ್ಲಿಸುವಂತೆ ಭಾರತದ ಖ್ಯಾತ ಕೈಗಾರಿಕೋದ್ಯಮಿ, ಟಾಟಾ ಗ್ರೂಪ್ನ ಅಧ್ಯಕ್ಷ ರತನ್ ಟಾಟಾ ನೆಟ್ಟಿಗರಿಗೆ ಕರೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾವನ್ನು ಮನಸ್ಸಿಗೆ ಬಂದಂತೆ ಬಳಸುಕೊಳ್ಳುತ್ತಿರುವ ಜನರು, ಅವರವರ ದೃಷ್ಟಿಕೋನದ ಪ್ರಕಾರ ಕೆಲವು ವಿಷಯಗಳ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ಬೆದರಿಕೆಗಳನ್ನೊಡ್ಡಲಾಗುತ್ತಿದೆ. ಇದು ಹಿಂಸೆಗೆ ಪ್ರಚೋದನೆ ನೀಡಲು, ಇತರರ ಬಗ್ಗೆ ದ್ವೇಷ ಹುಟ್ಟಿಸಲು ಕಾರಣವಾಗುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ, ಭಾರತ - ಚೀನಾ ಸಂಘರ್ಷದಂತಹ ವಿಚಾರಗಳು ಇದಕ್ಕೆ ಉದಾಹರಣೆಯಾಗಿವೆ.
"ಈ ವರ್ಷ ಸವಾಲಿನಿಂದ ತುಂಬಿರುವ ವರ್ಷ. ಈ ಸಮಯದಲ್ಲಿ ಆನ್‌ಲೈನ್ ಸಮುದಾಯದಲ್ಲಿ ಒಬ್ಬರಿಗೊಬ್ಬರು ನೋಯಿಸುವುದನ್ನು, ಒಬ್ಬರನ್ನೊಬ್ಬರು ಕೆಳಕ್ಕೆ ಇಳಿಸುವುದನ್ನು ನೋಡುತ್ತಿದ್ದೇವೆ. ಇದು ಪರಸ್ಪರರನ್ನು ಕೆಳಗಿಳಿಸುವ, ದ್ವೇಷವನ್ನು ಬಿತ್ತುವ ಸಮಯವಲ್ಲ. ವಿಶೇಷವಾಗಿ ಈ ವರ್ಷದಲ್ಲಿ ಎಲ್ಲರೂ ಭಾವೈಕ್ಯತೆಯಿಂದ ಬಾಳಬೇಕು. ದಯೆ, ತಾಳ್ಮೆ, ಅನುಭೂತಿ ಅಗತ್ಯ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷವನ್ನು ಬಿತ್ತರಿಸುವಂತಹ, ಬೆದರಿಕೆಗಳನ್ನು ಒಡ್ಡುವಂತಹ ಚಟುವಟಿಕೆಗಳನ್ನು ನಿಲ್ಲಿಸಿ" ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರತನ್ ಟಾಟಾ ಬರೆದಿದ್ದಾರೆ.