ಮುಂಬೈ: ಕೊರೊನಾ ಸಂಕಷ್ಟದಲ್ಲಿ ಜನರು ಸಿಲುಕಿರುವ ವೇಳೆ ಇಂಧನ ಬೆಲೆ ಏರಿಕೆಯು ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಲೇ ಇದ್ದು, ಒಂದು ತಿಂಗಳೊಳಗೆ ಅಂದರೆ 23 ದಿನದಲ್ಲಿ 14 ಬಾರಿ ಇಂಧನ ದರ ಹೆಚ್ಚಿಸಿವೆ.
ಮತ್ತೆ ಇಂದು ಲೀಟರ್ ಪೆಟ್ರೋಲ್ಗೆ 24 ಪೈಸೆ ಹಾಗೂ ಡೀಸೆಲ್ಗೆ 29 ಪೈಸೆ ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 93.68 ರೂ. ಹಾಗೂ ಡೀಸೆಲ್ ಬೆಲೆ 84.61 ರೂ.ಗೆ ಏರಿಕೆಯಾಗಿದೆ.
ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವಾರು ನಗರಗಳಲ್ಲಿ ಈಗಾಗಲೇ ಲೀಟರ್ ಪೆಟ್ರೋಲ್ ದರ 100 ರೂ. ದಾಟಿದೆ. ಈ ತಿಂಗಳ ಆರಂಭದಲ್ಲಿ ಭೋಪಾಲ್ ಮೂರಂಕಿಯನ್ನು ಮುಟ್ಟಿದ ಮೊದಲ ರಾಜ್ಯ ರಾಜಧಾನಿಯಾಗಿತ್ತು. ಇದೀಗ ರಾಜಸ್ಥಾನದ ರಾಜಧಾನಿ ಜೈಪುರದಲ್ಲೂ ಪೆಟ್ರೋಲ್ ಬೆಲೆ ಮೂರಂಕಿ ಮುಟ್ಟಿದ್ದು, ಮುಂಬೈ ನಗರ ಶತಕ ಬಾರಿಸಲು ಕೇವಲ 6 ಪೈಸೆ ಮಾತ್ರ ಬೇಕಾಗಿದೆ.
ಇದನ್ನೂ ಓದಿ: ಒಂದೇ ದಿನ 1,043 ರೂ. ಜಿಗಿದ ಬೆಳ್ಳಿ: ಬಂಗಾರ ದರದಲ್ಲಿಯೂ ಏರಿಕೆ..
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪ್ರತಿದಿನವೂ ಪರಿಷ್ಕರಿಸಲ್ಪಡುತ್ತವೆ. ಭಾರತದಲ್ಲಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಸರಕು ಸಾಗಣೆ ಶುಲ್ಕವನ್ನು ಅವಲಂಬಿಸಿ ಸ್ಥಳೀಯ ಮಾರುಕಟ್ಟೆಗಳಿಗನುಗುಣವಾಗಿ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಇದಲ್ಲದೆ ಕೇಂದ್ರ ಸರ್ಕಾರವು ವಾಹನ ಇಂಧನಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸುತ್ತದೆ.
ಬೆಂಗಳೂರು, ಕೋಲ್ಕತ್ತಾ, ಮುಂಬೈ, ಜೈಪುರ ಹಾಗೂ ಚೆನ್ನೈ ನಗರಗಳಲ್ಲಿನ ಇಂದಿನ ಇಂಧನ ಬೆಲೆ ಈ ಕೆಳಕಂಡಂತಿದೆ.
ನಗರ | ಪೆಟ್ರೋಲ್ | ಡೀಸೆಲ್ |
ದೆಹಲಿ | 93.68 ರೂ. | 84.61 ರೂ. |
ಬೆಂಗಳೂರು | 96.80 ರೂ. | 89.70 ರೂ. |
ಕೋಲ್ಕತ್ತಾ | 93.72 ರೂ. | 87.46 ರೂ. |
ಮುಂಬೈ | 99.94 ರೂ. | 91.87 ರೂ. |
ಚೆನ್ನೈ | 95.28 ರೂ. | 89.39ರೂ. |
ಜೈಪುರ | 100.05 ರೂ. | 93.12 ರೂ. |