ನವದೆಹಲಿ: ಕೋವಿಡ್ ನಂತರದ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಅನಿಯಮಿತ ಅವಕಾಶಗಳು ಬರುತ್ತಿದೆ. ಈ ಅವಕಾಶಗಳನ್ನು ಬಳಸಿಕೊಳ್ಳಲು ದೇಶ ಮುಂದಾಗಬೇಕು. ಜೊತೆಗೆ, ಮಾಹಿತಿ ಮತ್ತು ತೆರಿಗೆ ಪದ್ಧತಿಯಲ್ಲಿನ ಮಾನದಂಡಗಳ ನಿಯಂತ್ರಣದ ಅವಶ್ಯಕತೆ ಇದೆ ಎಂದು ಟಾಟಾ ಸನ್ಸ್ ಚೇರ್ಮನ್ ಎನ್. ಚಂದ್ರಶೇಖರನ್ ತಿಳಿಸಿದ್ದಾರೆ.
ಭಾರತೀಯ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ-ಎಫ್‌ಕೆಸಿಸಿಐನ 93ನೇ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, 2020 ಭಾರತದ ಪರವಾಗಿದೆ ಎಂಬುದನ್ನು ಅರಿಯಬೇಕು. ಕೈಗಾರಿಕೆಗಳು ವಿಸ್ತರಣೆಯಾಗಬೇಕು ಹಾಗೂ ಎಲ್ಲಾ ಯೋಜನೆಗಳಿಗಾಗಿ ದೂರದೃಷ್ಟಿ ಇಟ್ಟುಕೊಳ್ಳಬೇಕು. ಕೌಶಲ್ಯ, ಮಾಹಿತಿಯನ್ನು ಸಕ್ರಿಯಗೊಳಿಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರ ಮತ್ತು ಕೈಗಾರಿಕೆಗಳ ನಡುವಿನ ಸಹಕಾರಿ ಹಾಗೂ ಪಾತ್ರವನ್ನು ಕಂಡಿದ್ದೇನೆ. ಕೋವಿಡ್ ನಂತರದ ಹೊಸ ಪ್ರಪಂಚದಲ್ಲಿ ಭಾರತದ ಭಾಗವಹಿಸುವಿಕೆಗಾಗಿ ಕೈಗಾರಿಕೆ, ಸರ್ಕಾರದ ಸಹಭಾಗಿತ್ವವನ್ನು ಮತ್ತಷ್ಟು ಹೆಚ್ಚಿಸಬೇಕು. ಪ್ರತಿ ಹಳ್ಳಿಗೆ ಅಂತರ್ಜಾಲದ ಸಂಪರ್ಕ ಹಾಗೂ ಕಡಿಮೆ ದರದಲ್ಲಿ ಡೇಟಾ ನೀಡಬೇಕು ಎಂದರು.
ಮಾಹಿತಿ ಸಂರಕ್ಷಣೆ, ನಿವಾಸದ ಮಾಹಿತಿ, ಸ್ಥಳದ ಮಾಹಿತಿ, ಸಾಮಾನ್ಯ ತೆರಿಗೆ ವಿಧಿಸುವಿಕೆ ಮೇಲೆ ಕೆಲವು ನಿಯಂತ್ರಣಗಳನ್ನು ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಿದ್ಯುತ್, ಲಾಜಿಸ್ಟಿಕ್, ಕಾರ್ಮಿಕರ ಸಮಸ್ಯೆಗಳನ್ನು ನಾವು ಹೈಲೈಟ್ ಮಾಡುತ್ತೇವೆ. ಜೊತೆಗೆ ಹೆಚ್ಚಿನ ಬಡ್ಡಿ ದರಗಳು, ಅತಿಕ್ರಮಣ, ಹಸ್ತಕ್ಷೇಪ ಮಾಡುವುದನ್ನು ನೋಡಿದ್ದೇವೆ. ಆದರೆ ಭವಿಷ್ಯದಲ್ಲಿ ಈ ಎಲ್ಲವನ್ನೂ ಹೊರತುಪಡಿಸಿ ಹೊಸತನಕ್ಕಾಗಿ ದೂರದೃಷ್ಟಿ ಇಟ್ಟುಕೊಂಡಾಗ ಮಾತ್ರ ಭಾರತಕ್ಕೆ ಸಿಗುವ ಅವಕಾಶಗಳನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳಬಹುದು ಎಂದಿದ್ದಾರೆ.
ಉತ್ಪಾದನೆಯಲ್ಲಿನ ನಿರ್ವಹಣೆಗಾಗಿ ರೋಬೊಟಿಕ್ ಮತ್ತು ಎಐಗಳು (ಕೃತಕ ಬುದ್ದಿವಂತಿಕೆ) ಸೇರಿದಂತೆ ತಂತ್ರಜ್ಞಾನವನ್ನು ರೂಪಿಸಬೇಕು ಎಂದು ಚಂದ್ರಶೇಖರ್ ಒತ್ತಿ ಹೇಳಿದ್ದಾರೆ.