ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಮ್ಮ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ದೇಶೀಯವಾಗಿ ಜಾರಿಗೆ ತಂದಿದ್ದ ಆನ್‌ಲೈನ್ ವ್ಯವಸ್ಥೆಯ 'ರೂಪೇ ಕಾರ್ಡ್' ಅನ್ನು ಮಧ್ಯಪ್ರಾಚ್ಯದ ಯುಎಇನಲ್ಲಿ ಬಿಡುಗಡೆ ಮಾಡಿದರು.
ಮೋದಿ ಅವರು ಯುಎಇಗೆ (ಯುನೈಟೆಡ್ ಅರಬ್ ಎಮಿರೇಟ್ಸ್) ಭೇಟಿ ನೀಡದ್ದ ಸಂದರ್ಭದಲ್ಲಿ ಭಾರತೀಯ ಸ್ಥಳೀಯ ಮಾಸ್ಟರ್‌ಕಾರ್ಡ್ ಅಥವಾ ವೀಸಾಗೆ ಸಮಾನವಾದ ರೂಪೇ ಕಾರ್ಡ್ ಪ್ರಥಮ ಬಾರಿಗೆ ಮಧ್ಯಪ್ರಾಚ್ಯದ ಯುಎಇನಲ್ಲಿ ಚಾಲನೆ ನೀಡಿದರು.
ಬಳಿಕ ಒಂದು ಕೆ.ಜಿ ಲಡ್ಡು ಪ್ಯಾಕೆಟ್ ಖರೀದಿಸಿ ರೂಪೇ ಕಾರ್ಡ್ ಸ್ವೈಪ್ ಮಾಡಿ ಹಣ ಪಾವತಿಸಿದರು. ಯುಎಇಗೆ ವಾರ್ಷಿಕ 3 ಮಿಲಿಯನ್ ಭಾರತೀಯ ಪ್ರವಾಸಿಗರ ಭೇಟಿ ನೀಡುತ್ತಾರೆ. ಸುಮಾರು1,75,000 ವ್ಯಾಪಾರಿಗಳು ರೂಪೇ ಕಾರ್ಡ್ ವಹಿವಾಟಿಗೆ ಮಾನ್ಯತೆ ನೀಡಿದ್ದು, 5 ಸಾವಿರ ಎಟಿಎಂ ಕೇಂದ್ರಗಳಲ್ಲಿ ಬಳಸಬಹುದು.
ಭಾರತ ಮತ್ತು ಯುಎಇ ನಡುವಿನ ಪಾವತಿ ವೇದಿಕೆಯ ತಂತ್ರಜ್ಞಾನ ಮಧ್ಯಸ್ಥಿಕೆಯ ಕುರಿತು ತಿಳಿವಳಿಕೆ ಪತ್ರಕ್ಕೆ (ಎಂಒಯು) ಉಭಯ ರಾಷ್ಟ್ರಗಳು ಸಹಿ ಹಾಕಿ ರೂಪೇ ಕಾರ್ಡ್ ಅಂಗೀಕೃತಗೊಂಡಿತು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಯುಎಇನ ಮರ್ಕ್ಯುರಿ ಪಾವತಿ ಸೇವಾ ನಡುವೆ ಈ ಒಪ್ಪಂದ ಏರ್ಪಟ್ಟಿದೆ. ಯುಎಇನಾದ್ಯಂತ ಇರುವ ಪಾಯಿಂಟ್-ಆಫ್-ಸೆಲ್ಸ್ ಕೇಂದ್ರಗಳಲ್ಲಿ ಬಳಸಬಹುದಾಗಿದೆ.
ಭಾರತದ ರೂಪೇ ಕಾರ್ಡ್ ಈಗಾಗಲೇ ಸಿಂಗಾಪುರ ಮತ್ತು ಭೂತಾನ್‌ನಲ್ಲಿ ಬಿಡುಗಡೆಯಾಗಿ ಬಳಕೆಯಲ್ಲಿದೆ. ಇದೇ ಪ್ರಥಮ ಬಾರಿಗೆ ಮಧ್ಯಪ್ರಾಚ್ಯದ ಯುಎಇನಲ್ಲಿ ಬಿಡುಗಡೆಯಾಗಿದೆ.