ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ. ಪ್ರತಿಪಕ್ಷ ನಾಯಕರ ಸಭೆ ಕರೆದು ಅಡುಗೆ ಎಣ್ಣೆ, ತರಕಾರಿಗಳ ಬೆಲೆಯನ್ನು ಹೇಗೆ ತಗ್ಗಿಸುವುದು ಎಂಬುದರ ಕುರಿತು ಮುಂದಿನ 30 ದಿನಗಳವರೆಗೆ ಮಾರ್ಗಸೂಚಿಯನ್ನು ಹಾಕಬೇಕು ಎಂದು ಕಾಂಗ್ರೆಸ್ ತಾಕೀತು ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಂದೀಪ್ ಸಿಂಗ್ ಸುರ್ಜೆವಾಲಾ ಅವರು, ಚಿಲ್ಲರೆ ಹಣದುಬ್ಬರವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ಅದು ಈ ಹಿಂದಿನ 2013ರ ಮಟ್ಟವನ್ನು ಮೀರಿದೆ. ಕಳೆದ ಒಂಬತ್ತು ತಿಂಗಳಲ್ಲಿ ಹಣದುಬ್ಬರ ಪ್ರತಿ ತಿಂಗಳು ವೇಗವಾಗಿ ಮುಂದುವರಿಯುತ್ತಿದೆ. ಆದರೆ, ಪ್ರಧಾನಿ ಮೌನವಾಗಿದ್ದಾರೆ ಎಂದು ಟೀಕಿಸಿದರು.
2019ರ ಜುಲೈಲ್ಲಿ ಇದು ಶೇ 3.15ರಷ್ಟಿತ್ತು. ಆಗಸ್ಟ್ನಲ್ಲಿ ಶೇ 3.28, ಸೆಪ್ಟೆಂಬರ್ನಲ್ಲಿ ಶೇ 4ರಷ್ಟು, ಅಕ್ಟೋಬರ್ರನಲ್ಲಿ ಶೇ 4.62ರಷ್ಟು, ನವೆಂಬರ್ನಲ್ಲಿ ಶೇ 5.54ರಷ್ಟು ಹಾಗೂ ಡಿಸೆಂಬರ್ನಲ್ಲಿ ಶೇ 7.35 ಮತ್ತು ಈಗ ಶೇ 8ಕ್ಕೆ ಮುಟ್ಟಿದೆ ಎಂದು ಸುರ್ಜೆವಾಲಾ ಟೀಕಿಸಿದರು.
ತರಕಾರಿ ಬೆಲೆಗಳು ಶೇ 60ರಷ್ಟು, ದ್ವಿದಳ ಧಾನ್ಯಗಳ ಬೆಲೆ ಶೇ 15.5ರಷ್ಟು ಆಹಾರ ಮತ್ತು ಪಾನೀಯಗಳು ಶೇ 12.5ರಷ್ಟು, ಮಾಂಸ ಮತ್ತು ಮೀನುಗಳು ಶೇ 10ರಷ್ಟು ಮತ್ತು ಮಸಾಲೆಗಳ ದರ ಶೇ 6ರಷ್ಟು ಏರಿಕೆಯಾಗಿದೆ. ಮುಂದಿನ 15 ಅಥವಾ 30 ದಿನಗಳ ಒಳಗೆ ಎಲ್ಲ ಪ್ರತಿಪಕ್ಷಗಳ ಸಭೆ ಕರೆದು ಬೆಲೆ ಏರಿಕೆ ತಗ್ಗಿಸುವ ಕುರಿತು ಚರ್ಚಿಸಬೇಕು. ಲಕ್ಷಾಂತರ ಜನ ಆಹಾರ ಪದಾರ್ಥಗಳ ಮೇಲಿನ ಖರ್ಚಿನ ಮೊತ್ತ ತಗ್ಗಿಸಿದ್ದು, ನಿತ್ಯದ ಪೌಷ್ಟಿಕ ಆಹಾರ ಸೇವನೆ ಸಹ ಕಡಿಮೆ ಆಗಿದೆ ಎಂದು ಕಾಂಗ್ರೆಸ್ ಮುಖಂಡ ಆರೋಪಿಸಿದರು.