ನವದೆಹಲಿ: ಜೂನ್ 7 ರಿಂದ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾದ ಕಾರಣ ಗ್ರಾಹಕರು ಕಂಗಾಲಾಗಿದ್ದರು. ಕಳೆದೊಂದು ವಾರದಿಂದ ಇಂಧನ ಬೆಲೆ ಏರಿಕೆಗೆ ಕಡಿವಾಣ ಬಿದ್ದಿದ್ದು, ವಾಹನ ಸವಾರರು ತುಸು ನಿಟ್ಟುಸಿರು ಬಿಟ್ಟಿದ್ದರು. ಆದರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗಿದ್ದು, ಮುಂದಿನ ವಾರದಿಂದ ಮತ್ತೆ ಇಂಧನ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಪ್ರತಿ ಬ್ಯಾರೆಲ್‌ಗೆ $ 42 ರಷ್ಟಿದ್ದ ಕಚ್ಚಾ ತೈಲದ ದರ ಇದೀಗ $ 45 ಕ್ಕೆ ಏರಿಕೆಯಾಗುತ್ತಿದೆ. ಮುಂದಿನ ಎರಡು ದಿನಗಳವರೆಗೆ ಕಾಯುತ್ತೇವೆ. ಒಂದು ವೇಳೆ ಕಚ್ಚಾ ತೈಲದ ಬೆಲೆ ಇನ್ನಷ್ಟು ಹೆಚ್ಚಾದರೆ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸದೆ ತೈಲ ಕಂಪನಿಗಳಿಗೆ ಬೇರೆ ದಾರಿಯಿಲ್ಲ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಯೊಂದರ ಕಾರ್ಯನಿರ್ವಾಹಕರು ಹೇಳಿದ್ದಾರೆ.
ಪೆಟ್ರೋಲ್‌ಗಿಂತ ಡೀಸೆಲ್ ಬೆಲೆ ಹೆಚ್ಚಿರುವ ದೇಶದ ಏಕೈಕ ಪ್ರಮುಖ ನಗರ ದೆಹಲಿಯಾಗಿತ್ತು. ಹೀಗಾಗಿ ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇಕಡಾ 30 ರಿಂದ ಶೇ 16ಕ್ಕೆ ಇಳಿಕೆ (ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 8.38 ರೂ. ಇಳಿಕೆ) ಮಾಡಿ ದೆಹಲಿ ಸರ್ಕಾರ ಜುಲೈ 30 ರಂದು ಆದೇಶ ಹೊರಡಿಸಿತ್ತು. ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಲೀಟರ್ ಪೆಟ್ರೋಲ್ಗೆ 80.43 ರೂ. ಹಾಗೂ ಡೀಸೆಲ್ಗೆ 73.56 ರೂ. ಇದೆ. ಮತ್ತೆ ಇಂಧನ ಬೆಲೆಯಲ್ಲಿ ಏರಿಕೆಯಾದರೆ ದೆಹಲಿ ಸೇರಿದಂತೆ ದೇಶದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬದಲಾವಣೆಯಾಗಲಿದೆ.