ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಇಂದು ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ನವೆಂಬರ್ 4 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 5 ಹಾಗೂ 10 ರೂಪಾಯಿ ಕಡಿತ ಮಾಡಿತ್ತು. ಆ ಬಳಿಕ ತೈಲ ಬೆಲೆಯಲ್ಲಿ ಯಾವುದೇ ರೀತಿಯ ಏರಿಳಿತವಾಗಿಲ್ಲ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ಲೀಟರ್ ಪೆಟ್ರೋಲ್ 103.97 ರೂಪಾಯಿಗೆ ಹಾಗೂ 86.67 ರೂಪಾಯಿಗೆ ಮಾರಾಟವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ 100.58 ರೂಪಾಯಿ ಹಾಗೂ ಡೀಸೆಲ್ 85.01 ರೂಪಾಯಿ ಇದೆ. ಚೆನ್ನೈನಲ್ಲಿ ಪೆಟ್ರೋಲ್ 101.40 ರೂಪಾಯಿ, ಡೀಸೆಲ್ 91.43 ರೂ, ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ 109.98 ರೂಪಾಯಿ ಹಾಗೂ ಡೀಸೆಲ್ 94.14 ರೂಪಾಯಿಗೆ ಮಾರಾಟವಾಗುತ್ತಿದೆ.
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರಗಳನ್ನು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪರಿಷ್ಕರಿಸಲಾಗುತ್ತದೆ. ಇಂಧನದ ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ.
ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟದ ಬೆಲೆ ದ್ವಿಗುಣಗೊಳ್ಳುತ್ತದೆ.
ರೂಪಾಯಿಗೆ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನ ಬೇಡಿಕೆ ಇತ್ಯಾದಿಗಳಿಂದ ತೈಲ ಬೆಲೆಯಲ್ಲಿ ಏರಿಳಿತವಾಗುತ್ತದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಏರಿದಾಗ ಭಾರತದಲ್ಲಿ ಬೆಲೆಗಳು ಹೆಚ್ಚಾಗುತ್ತವೆ.