ನವದೆಹಲಿ: ಸೆಪ್ಟೆಂಬರ್ 1ರೊಳಗೆ ಪಾನ್ ಕಾರ್ಡ್ ಇರುವವರು ಆಧಾರ್ ಸಂಖ್ಯೆಯನ್ನು ಜೋಡಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ನಿರ್ದೇಶಿಸಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪಾನ್ ಜೊತೆಗೆ ಆಧಾರ್ ಸಂಖ್ಯೆ ಜೋಡಿಸುವುದು ಕಡ್ಡಾಯವಾಗಿದೆ. ನಿಮ್ಮ ಪಾನ್ ಕಾರ್ಡ್‌ಗೆ ಆಧಾರ್ ಸಂಖ್ಯೆ ಲಿಂಕ್ ಮಾಡಲು ಸೆಪ್ಟೆಂಬರ್ 1ರ ಕೊನೆಯ ದಿನವಾಗಿದೆ. ಅಸ್ತಿತ್ವದಲ್ಲಿರುವ 400 ಮಿಲಿಯನ್ ಪಾನ್ ಕಾರ್ಡುಗಳಲ್ಲಿ 180 ಮಿಲಿಯನ್ ಕಾರ್ಡ್ಗಳು ಸಂಪರ್ಕ ಹೊಂದಿಲ್ಲ. ಹೀಗಾಗಿ, ಆಧಾರ್‌ಗೆ ಸಂಪರ್ಕ ಹೊಂದಿಲ್ಲದ ಎಲ್ಲ ಪ್ಯಾನ್ ಕಾರ್ಡ್‌ಗಳನ್ನು ಅಮಾನ್ಯಗೊಳಿಸಲಾಗುವುದು ಎಂದು ಎಚ್ಚರಿಸಿದೆ.
ಪಾನ್ ಕಾರ್ಡ್‌ಗೆ ಆಧಾರ್ ಸಂಖ್ಯೆ ಲಿಂಕ್ ಮಾಡದವರು ಈ ಕೆಳಗಿರುವ ಯಾವುದಾದರೂ ಒಂದು ವಿಧಾನದ ಮುಖಾಂತರ ಪಾನ್ನೊಂದಿಗೆ ಆಧಾರ್ ಜೋಡಿಸಬಹುದು.
*ww.incometaxindiaefiling.gov.in ವೆಬ್ತಾಣಕ್ಕೆ ಭೇಟಿ ನೀಡಿ ಲಿಂಕ್ ಆಧಾರ್ ಎನ್ನುವ ಲಿಂಕ್ ಒತ್ತಿ ಆಧಾರ್ ಜೋಡಿಸಬಹುದು.
1. ಈ ಜಾಲತಾಣದ ಎಡಭಾಗದಲ್ಲಿ ಆಧಾರ್ ಜೋಡಣೆ (Link Aadhaar) ಎಂಬ ಲಿಂಕ್ ನೀಡಲಾಗಿದೆ. ಇದನ್ನು ಕ್ಲಿಕ್ಕಿಸಿದರೆ ಆಧಾರ್-ಪ್ಯಾನ್ ಜೋಡಣೆಯ ಪ್ರತ್ಯೇಕ ವಿಭಾಗ ತೆರೆದುಕೊಳ್ಳುತ್ತದೆ.
2. ಈ ವಿಭಾಗದಲ್ಲಿ ತೆರಿಗೆದಾರರು ಮೊದಲ ಬಾಕ್ಸ್ನಲ್ಲಿ ತಮ್ಮ ಪ್ಯಾನ್ ಕಾರ್ಡ್ ನಂಬರ್, 2ನೇ ಬಾಕ್ಸ್ನಲ್ಲಿ ಆಧಾರ್ ನಂಬರ್, 3ನೇ ಬಾಕ್ಸ್ನಲ್ಲಿ ಆಧಾರ್ನಲ್ಲಿರುವಂತೆ ತಮ್ಮ ಹೆಸರನ್ನು ನಮೂದಿಸಬೇಕು.
3. ಬಾಕ್ಸ್ ಕೆಳಗೆ ಕಾಣುವ ಕೋಡ್ ಅನ್ನು ಬಾಕ್ಸ್ನಲ್ಲಿ ನಮೂದಿಸಿ ಅದರ ಕೆಳಗಿರುವ ಲಿಂಕ್ ಆಧಾರ್ ಎಂಬ ಬಾಕ್ಸ್ ಕ್ಲಿಕ್ಕಿಸಿದರೆ ಆಧಾರ್ ಮತ್ತು ಪ್ಯಾನ್ ಜೋಡಣೆ ಕಾರ್ಯ ಪೂರ್ಣಗೊಳ್ಳುತ್ತದೆ.
ಇತರೆ ಮಾರ್ಗಗಳು:
* ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವಾಗ ಲಿಂಕ್ ಮಾಡಬಹುದು
* ಎಸ್‌ಎಂಎಸ್ ಮೂಲಕ ಜೋಡಿಸಲು UIDPAN<12-digit Aadhaar><10-digit PAN> ಎಂದು ಟೈಪ್ ಮಾಡಿ 567678 ಇಲ್ಲವೇ 56161ಗೆ ಎಸ್‌ಎಂಎಸ್ ಕಳಿಸಬಹುದು
* ಹೊಸ ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗಲೂ ಕೂಡ ಪಾನ್ ನೊಂದಿಗೆ ಆಧಾರ್ ಜೋಡಿಸಲು ಅವಕಾಶವಿದೆ.