ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆಯಲ್ಲಿ (ಸಿಬಿಐ) ಸಾವಿರ ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಪ್ರಕ್ರಿಯೆಗಾಗಿ ಕಾಯುತ್ತಿವೆ.
ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಜ್ಯಖಾತೆಯ ಸಚಿವ ಜಿತೇಂದ್ರ ಸಿಂಗ್ ಅವರು, ಸಿಬಿಐನ ಒಟ್ಟು 5,534 ಹುದ್ದೆಗಳಲ್ಲಿ 4,503 ಹುದ್ದೆಗಳು ಭರ್ತಿಯಾಗಿವೆ. ಉಳಿದ 1,029 ಸ್ಥಾನಗಳು ಖಾಲಿ ಇದ್ದು, ಈ ಹುದ್ದೆಗಳಿಕೆ ನೇಮಕಾತಿ ಪ್ರಕ್ರಿಯೆ ನಡೆಯಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.
ಸಿಬಿಐ ತನ್ನಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಿದ್ದು, ಖಾಲಿ ಇರುವ ಬಹುತೇಕ ಹುದ್ದೆಗಳು ಉನ್ನತ ಹಂತದ ಸ್ಥಾನಗಳೇ ಆಗಿವೆ ಎಂದರು.
5,000 ಹುದ್ದೆಗಳು ಉನ್ನತ ಅಧಿಕಾರಿ ಶ್ರೇಣಿ ಹೊಂದಿದ್ದರೇ 4,140 ಸಿಬ್ಬಂದಿ ಸ್ಥಾನಮಾನದ ಹುದ್ದೆಗಳಿವೆ. ಒಟ್ಟು 370 ಕಾನೂನು ಸಂಬಂಧಿತ ಹುದ್ದೆಗಳಲ್ಲಿ 296 ಸ್ಥಾನಗಳು ಭರ್ತಿಯಾಗಿವೆ. 167 ತಾಂತ್ರಿಕ ವರ್ಗದ ಸಿಬ್ಬಂದಿಯಲ್ಲಿ 67 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ಸಿಬಿಐಗೆ ತನ್ನದೆಯಾದ ಹಣಕಾಸು ಮತ್ತು ಆಡಳಿತಾತ್ಮಕ ಅಧಿಕಾರ ಹೊಂದಿದೆ. ಕೇಂದ್ರ ಸರ್ಕಾರ ಸ್ವಾಯತ್ತ ಸಂಸ್ಥೆಯ ವಿಚಾರಣೆ ಹಾಗೂ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಸಿಂಗ್ ಸ್ಪಷ್ಟನೆ ನೀಡಿದ್ದಾರೆ.