ನವದೆಹಲಿ: ಪ್ರಸ್ತುತ ಅಸ್ತಿತ್ವದಲ್ಲಿರುವ ಸುಮಾರು 6 ಸಾವಿರಕ್ಕೂ ಹೆಚ್ಚು ಕ್ರಿಪ್ಟೋಕರೆನ್ಸಿಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಮುಂದಿನ ದಿನಗಳಲ್ಲಿ ಉಳಿಯಬಹುದು ಎಂದು ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಬುಧವಾರ ಹೇಳಿದ್ದಾರೆ.
ಕ್ರಿಪ್ಟೋಕರೆನ್ಸಿಯ ಕುರಿತು ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಕ್ರಿಪ್ಟೋಕರೆನ್ಸಿ ತುಂಬಾ ದಿನಗಳವರೆಗೆ ತನ್ನ ಮೌಲ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಬಹುತೇಕ ಕ್ರಿಪ್ಟೋಕರೆನ್ಸಿಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ ಎಂದು ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.
ಅಷ್ಟೊಂದು ಕ್ರಿಪ್ಟೋಕರೆನ್ಸಿಗಳು ನಮಗೆ ಬೇಕಾ?
ಯಾವುದೇ ಪೇಮೆಂಟ್ ಮಾಡಲು ನಮಗೆ ನಿಜವಾಗಿಯೂ 6,000 ಕ್ರಿಪ್ಟೋಕರೆನ್ಸಿಗಳು ಬೇಕೇ? ಎಂದು ಪ್ರಶ್ನಿಸಿರುವ ಅವರು ಭವಿಷ್ಯದಲ್ಲಿ ಒಂದು ಅಥವಾ ಎರಡು ಕ್ರಿಪ್ಟೋಕರೆನ್ಸಿಗಳು ಮಾತ್ರ ಉಳಿಯುತ್ತವೆ. ಹಣಕ್ಕೆ ಬದಲಾಗಿ ಅವು ಯಾವುದೇ ಪಾವತಿ ಮಾಡಲು ಸಹಕರಿಯಾಗುತ್ತವೆ ಎಂದಿದ್ದಾರೆ.
ಕೆಲವು ವಿನಾಯಿತಿಗಳೊಂದಿಗೆ ಎಲ್ಲ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಪರಿಚಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ ನಂತರ ಹಲವಾರು ವಲಯಗಳಿಂದ ವಿಭಿನ್ನ ಅಭಿಪ್ರಾಯಗಳು ಹೊರಹೊಮ್ಮುತ್ತಿದ್ದು, ಈ ಹಿನ್ನೆಲೆಯಲ್ಲಿ ರಘುರಾಮ್ ರಾಜನ್ ಪ್ರತಿಕ್ರಿಯೆ ನೀಡಿದ್ದಾರೆ.
ನವೆಂಬರ್ 29ರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 'ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ಮಸೂದೆ, 2021' ಮಂಡನೆಯಾಗಲಿದ್ದು, ಆರ್ಬಿಐ ನೂತನ ಡಿಜಿಟಲ್ ಕರೆನ್ಸಿಯನ್ನು ಹೊರಡಿಸುವ ಸಾಧ್ಯತೆ ದಟ್ಟವಾಗಿದೆ.
ಭಾರತದಲ್ಲಿನ ಎಲ್ಲ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಮಸೂದೆ ತರಲಾಗುತ್ತದೆ. ಆದರೂ, ಕ್ರಿಪ್ಟೋಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಬಳಸಲು ಈ ಮಸೂದೆ ಉತ್ತೇಜನ ನೀಡುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: Crypto Currencies: ಜಗತ್ತಿನಲ್ಲಿರುವ ಅಗ್ರ 10 ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ತಿಳಿದುಕೊಳ್ಳಿ