ನವದೆಹಲಿ: ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಬಳಕೆದಾರರ ಹೆಚ್ಚಳದೊಂದಿಗೆ ಭಾರತದಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. 2026ರ ವೇಳೆಗೆ ಆನ್‌ಲೈನ್ ಖರೀದಿದಾರರಲ್ಲಿ 2.5 ರಷ್ಟು ಹೆಚ್ಚಳ ಕಾಣುವುದರೊಂದಿಗೆ (online shopping explodes in India)ದೇಶದಲ್ಲಿ ಇ-ಕಾಮರ್ಸ್ ಕಂಪನಿಗಳ ಮೂಲಕ 500 ಬಿಲಿಯನ್ ಡಾಲರ್ ವಹಿವಾಟು ನಡೆಯಲಿದೆ ಎಂದು ಬೆಂಗಳೂರು ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ರೆಡ್ಸೀರ್ನ ಹೊಸ ವರದಿ (Red Seer report)ತಿಳಿಸಿದೆ.
ಮುಂದಿನ 5 ವರ್ಷಗಳಲ್ಲಿ ಭಾರತದ ಪ್ರಮುಖ ನಗರಗಳಲ್ಲಿ 24 ಮಿಲಿಯನ್(24 ಕೋಟಿ) ಆನ್‌ಲೈನ್ ಖರೀದಿದಾರರು (ಪ್ರಸ್ತುತ 16 ಮಿಲಿಯನ್ ಖರೀದಿದಾರರಿದ್ದಾರೆ) ಹುಟ್ಟಿಕೊಳ್ಳುವ ನಿರೀಕ್ಷೆ ಇದೆ. ಜೊತೆಗೆ ಪ್ರತಿಯೊಂದು ಕುಟುಂಬದ ಖರೀದಿಯಲ್ಲಿ 13 ಸಾವಿರ ಡಾಲರ್ನಿಂದ 20 ಸಾವಿರ ಡಾಲರ್ವರೆಗೆ(14 ಲಕ್ಷ ರೂಪಾಯಿ) ಪ್ರಗತಿ ಕಾಣಲಿದೆ. ಇದು ಕ್ರಮೇಣ 480 ಶತಕೋಟಿ ದಾಟಲಿದೆ ಎಂದು ವರದಿ ಅಂದಾಜಿಸಿದೆ.
ಮೊದಲ ಸ್ಥಾನದಲ್ಲಿ ಅಮೆರಿಕ
125 ಮಿಲಿಯನ್ ಆನ್‌ಲೈನ್ ಖರೀದಿದಾರರಿರುವ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 2026ರ ವೇಳೆಗೆ ಭಾರತ 24 ಮಿಲಿಯನ್ ಖರೀದಿದಾರರನ್ನು ಕಾಣುವ ಮೂಲಕ ಎರಡನೇ ಸ್ಥಾನ ತಲುಪಲಿದೆ ಎಂಬುದು ವರದಿಯಲ್ಲಿನ ಗಮನಾರ್ಹ ಅಂಶವಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆನ್‌ಲೈನ್ ಖರೀದಾರರ ಪ್ರಸರಣ ಸಂಖ್ಯೆ ತೀವ್ರ ಗತಿಯಲ್ಲಿ ಏರುತ್ತಿದೆ. ಅಲ್ಲದೇ, ಪಟ್ಟಣ ನಿವಾಸಿಗಳ ಜೀವನ ಶೈಲಿಯೂ ಬದಲಾಗುತ್ತಿದೆ. ಇದರಿಂದಾಗಿ ಆನ್‌ಲೈನ್ ಖರೀದಿಯಲ್ಲಿ ಮುಂದಿನ ದಿನಮಾನಗಳಲ್ಲಿ ಭಾರಿ ಪ್ರಮಾಣದಲ್ಲಿ ಪ್ರಗತಿ ಕಾಣಲಿದೆ ಎಂದು ರೆಡ್ಸೀರ್ ವರದಿ ಉಲ್ಲೇಖಿಸಿದೆ.
ಶೇಕಡಾ 45ರಷ್ಟು ಆನ್‌ಲೈನ್ ವ್ಯವಹಾರಕ್ಕೆ ವೆಚ್ಚ
ಭಾರತದ 50 ಪ್ರಮುಖ ನಗರಗಳ ಶೇಕಡಾ 32ರಷ್ಟು ಜನಸಂಖ್ಯೆ ಶೇಕಡಾ 45ರಷ್ಟು ಪ್ರಮಾಣದಲ್ಲಿ ಆನ್‌ಲೈನ್ ಖರೀದಿಯಲ್ಲೇ ತಮ್ಮ ಹಣವನ್ನು ವೆಚ್ಚ ಮಾಡುತ್ತಿದ್ದಾರೆ. ಇದು ಭಾರತದ ಆನ್‌ಲೈನ್ ಖರೀದಿದಾರರ ಸಂಖ್ಯೆಯಲ್ಲಿ ಹೆಚ್ಚಳ ಕಾಣುವುದಕ್ಕೆ ಕಾರಣವಾಗಿದೆ.
ಇನ್ನೊಂದು ಅಂಶದ ಪ್ರಕಾರ, ಆನ್‌ಲೈನ್ ಬಳಕೆದಾರರಲ್ಲಿ ಹೆಚ್ಚಳ ಕಾಣುತ್ತಿದ್ದರೂ, ದೇಶದ ಕೆಲ ಪ್ರಮುಖ ನಗರಗಳಲ್ಲಿ ಇನ್ನೂವರೆಗೂ ಖರೀದಿದಾರರ ಕೊರತೆ ಇದೆ ಎಂದು ವರದಿ ಕಂಡುಕೊಂಡಿದೆ.
ಆದಾಗ್ಯೂ, ಮುಂದಿನ 5 ವರ್ಷಗಳಲ್ಲಿ ಪ್ರತಿ ಕುಟುಂಬದ ಆದಾಯ ಮತ್ತು ಖರೀದಿ ವೆಚ್ಚ ಬದಲಾಗಲಿದೆ. ಇದು ಮುಂದಿನ ದಿನಮಾನಗಳಲ್ಲಿ ಅಮೆರಿಕಾ ಮತ್ತು ಜರ್ಮನಿ ದೇಶಗಳ ಸಾಲಿಗೆ ಸೇರಲಿದೆ ಎಂದು ವರದಿ ತಿಳಿಸಿದೆ.
ಆನ್‌ಲೈನ್ ಖರೀದಿದಾರರ ಹೆಚ್ಚಳಕ್ಕೆ ಕೊರೋನಾ ಸಾಂಕ್ರಾಮಿಕ ರೋಗ ಕಾರಣವಾಗಿದೆ ಎಂದು ಹೇಳಬಹುದು. ಜನರು ತಮ್ಮ ಅಗತ್ಯತೆಗಳನ್ನು ಇ-ಕಾಮರ್ಸ್ ಕಂಪನಿಗಳ ಮೂಲಕ ಪೂರೈಸಿಕೊಳ್ಳಲು ಮುಂದಾಗಿರುವುದು ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣವಾಗಿದೆ ಎಂಬುದು ವರದಿಯ ಅಂಬೋಣವಾಗಿದೆ.