ನವದೆಹಲಿ: ರಾಷ್ಟ್ರೀಯ ಷೇರು ಮಾರುಕಟ್ಟೆ (ಎನ್ಎಸ್ಇ) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ವಿಶೇಷ ಸಿಬಿಐ ಕೋರ್ಟ್ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಿತ್ರಾ ರಾಮಕೃಷ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ತಮ್ಮ ವಕೀಲರ ಮೂಲಕ ಚಿತ್ರಾ ರಾಮಕೃಷ್ಣ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಚಿತ್ರಾ ಅವರ ಅರ್ಜಿಗೆ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಪ್ರಾಸಿಕ್ಯೂಷನ್ನ ವಾದವನ್ನು ಆಲಿಸಿದ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಫೆಬ್ರವರಿ 24ರಂದು ವಂಚನೆ ಪ್ರಕರಣದಲ್ಲಿ ಸಿಬಿಐ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮಾಜಿ ಗ್ರೂಪ್ ಆಪರೇಟಿಂಗ್ ಅಧಿಕಾರಿ ಆನಂದ್ ಸುಬ್ರಮಣಿಯನ್ ಅವರನ್ನು ಬಂಧಿಸಿದ್ದು, ಮಾರ್ಚ್ 6ರವರೆಗೆ ತನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.
ಹಿಮಾಲಯದ ಯೋಗಿ ಪ್ರಸ್ತಾಪ: ಪ್ರಕರಣದ ತನಿಖೆ ವೇಳೆ ನಿಗೂಢವಾಗಿರುವ 'ಹಿಮಾಲಯದ ಯೋಗಿ'ಯ ಬಗ್ಗೆ ಪ್ರಸ್ತಾಪವಾಗಿದ್ದು, ಈ ಅವ್ಯವಹಾರ ಪ್ರಕರಣದಲ್ಲಿ ಆತನನ್ನೂ ಪತ್ತೆ ಹಚ್ಚಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.
ಈ ನಿಗೂಢ ವ್ಯಕ್ತಿಯೊಂದಿಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಿತ್ರಾ ರಾಮಕೃಷ್ಣ ಅವರಿಗೆ ಸುಮಾರು 3 ಕೋಟಿ ರೂಪಾಯಿಗಳ ದಂಡವನ್ನು ಸೆಬಿ (SEBI) ವಿಧಿಸಿತ್ತು. 2014 ಮತ್ತು 2016ರ ನಡುವೆ ಅವರು rigyajursama@outlook.com ಎಂಬ ಇಮೇಲ್ ಐಡಿಗೆ ಮಾಹಿತಿಯನ್ನು ಕಳುಹಿಸಿದ್ದರು ಎನ್ನಲಾಗ್ತಿದೆ.
ಏಪ್ರಿಲ್ 1, 2013ರಲ್ಲಿ ಚಿತ್ರಾ ರಾಮಕೃಷ್ಣ ರಾಷ್ಟ್ರೀಯ ಷೇರು ಮಾರುಕಟ್ಟೆಯ ಸಿಇಒ ಮತ್ತು ಎಂಡಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಅವರು ಆನಂದ್ ಸುಬ್ರಮಣ್ಯನ್ ಅವರನ್ನು ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದರು. ಇದಾದ ನಂತರ ಅವರು ಅವ್ಯವಹಾರದಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.
ಇದನ್ನೂ ಓದಿ: ಹವಾಲಾ ದಂಧೆ ನಡೆಸುತ್ತಿದ್ದವರ ಮೇಲೆ ದಾಳಿ.. ₹4.2 ಕೋಟಿ ವಶಕ್ಕೆ ಪಡೆದ ಪೊಲೀಸ್
ಆನಂದ್ ಸುಬ್ರಮಣಿಯನ್ ಅವರು ಅಕ್ಟೋಬರ್ 2016ರಲ್ಲಿ ಮತ್ತು ಚಿತ್ರಾ ರಾಮಕೃಷ್ಣ ಅವರು ಡಿಸೆಂಬರ್ 2016ರಲ್ಲಿ ರಾಷ್ಟ್ರೀಯ ಷೇರುಮಾರುಕಟ್ಟೆಯನ್ನು ತೊರೆದಿದ್ದರು. ಆದರೆ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ ತನಿಖೆ ನಡೆಸುತ್ತಿದೆ.