ವಾಷಿಂಗ್ಟನ್: ವೀಸಾ ಅವಧಿ ಮುಗಿದು ನೆಲೆಸಿರುವ ತನ್ನ ಪ್ರಜೆಗಳನ್ನು ಅಮೆರಿಕ ಹಸ್ತಾಂತರ ಮಾಡಲು ಸಿದ್ಧವಿದ್ದರೂ, ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರಾಕರಿಸಿದ ಪಾಕಿಸ್ತಾನಕ್ಕೆ ಅಮೆರಿಕ ದಿಗ್ಬಂಧನ ವಿಧಿಸಲಿದೆ.
ಪುಲ್ವಾಮಾ ದಾಳಿ ಬಳಿಕ ಚೀನಾ ಹೊರತುಪಡಿಸಿ ಜಾಗತಿಕ ರಾಷ್ಟ್ರಗಳು ಪಾಕಿಸ್ತಾನಕ್ಕೆ ಒಂದೊಂದೇ ಏಟು ಕೊಡುತ್ತಿವೆ. ಈಗ ಅಮೆರಿಕ ಪಾಕ್ ಮೇಲೆ ಕೆಂಗಣ್ಣು ಬೀರಿದ್ದು, ವೀಸಾ ಅವಧಿ ಮುಗಿದ ಪಾಕ್ ಪ್ರಜೆಗಳು ಇನ್ನೂ ಅಮೆರಿಕದಲ್ಲಿ ನೆಲಸಿದ್ದಾರೆ. ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವಂತೆ ದೊಡ್ಡಣ್ಣ ಆಜ್ಞೆ ಮಾಡಿದ್ದರೂ ಅದನ್ನು ಪಾಲಿಸಲು ಪಾಕ್ ಹಿಂದೇಟು ಹಾಕಿದೆ. ಹೀಗಾಗಿ, ಅಮೆರಿಕ ಪಾಕಿಸ್ತಾನದ ಮೇಲೆ ವೀಸಾ ದಿಗ್ಬಂಧನ ವಿಧಿಸುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಪಾಕ್ನ ಹಿರಿಯ ಅಧಿಕಾರಿಗಳಿಂದ ಆರಂಭಿಸಿ ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ನೀಡಲು ನಿರಾಕರಿಸುವುದಾಗಿ ಎಚ್ಚರಿಕೆ ನೀಡಿದೆ.
ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ, ಪಾಕ್ನ ರಾಜತಾಂತ್ರಿಕ ಸಂಬಂಧ ಉತ್ತಮವಾಗಿದ್ದರೂ ಈ ಧೋರಣೆ ಸರಿಯಾಗಿಲ್ಲ. ಅಕ್ರಮ ವಲಸಿಗರನ್ನು ಹಿಂದಕ್ಕೆ ಕರಿಯಿಸಿಕೊಳ್ಳಲು ಮುಂದಾಗುತ್ತಿಲ್ಲ. ಈ ಕಾರಣಕ್ಕಾಗಿ ದಿಗ್ಬಂಧನ ವಿಧಿಸಲಾಗುತ್ತಿದೆ ಎಂದು ವಾಷಿಂಗ್ಟನ್ ಹೇಳಿದೆ.
ವಲಸೆ ಮತ್ತು ರಾಷ್ಟ್ರೀಯತೆಯ ಕಾಯ್ದೆಯ ಸೆಕ್ಷನ್ 243 (ಡಿ) ಅಡಿ ವೀಸಾ ಅವಧಿ ಮುಗಿದ ಬಳಿಕ ಅಮೆರಿಕದಲ್ಲಿ ನೆಲೆಸಿರುವ ತನ್ನ ಪ್ರಜೆಗಳನ್ನು ಹಸ್ತಾಂತರ ಮಾಡಿದರೂ ನಿರಾಕರಿಸದ ರಾಷ್ಟ್ರಗಳ ಮೇಲೆ ದಿಗ್ಬಂಧನ ವಿಧಿಸಬಹುದಾಗಿದೆ. ಈಗಾಗಲೇ 10 ರಾಷ್ಟ್ರಗಳು ಈ ದಿಗ್ಬಂಧನಕ್ಕೆ ಒಳಗಾಗಿದ್ದು, ಈ ವರ್ಷ ಪಾಕಿಸ್ತಾನ ಹಾಗೂ ಘಾನ ಸೇರಿಕೊಳ್ಳಲಿವೆ.