ನವದೆಹಲಿ: ರಿಲಯನ್ಸ್ ಈಗ ಪ್ರಮುಖ ನಾಯಕತ್ವದ ಪರಿವರ್ತನೆಯ ಪ್ರಕ್ರಿಯೆಯಲ್ಲಿ ಇದೆ ಎಂದು ಏಷ್ಯಾದ ನಂಬರ್ 1 ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹೇಳಿದ್ದಾರೆ. ಹೀಗಾಗಿ ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ನಾಯಕತ್ವದ ಬದಲಾವಣೆಗಳು ಆಗಲಿವೆ ಎಂಬ ಮಾತುಗಳು ಕೇಳಿಬಂದಿವೆ. ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಅನಂತ್, ಆಕಾಶ್ ಹಾಗೂ ಇಶಾ ಎಂಬ ಮೂವರು ಮಕ್ಕಳಿದ್ದಾರೆ.
ಚಿಲ್ಲರೆ ವ್ಯಾಪಾರದ ಒಕ್ಕೂಟದಲ್ಲಿ ನಾಯಕತ್ವ ಪರಿವರ್ತನೆಯ ಬಗ್ಗೆ ಪ್ರಸ್ತಾಪಿಸಿರುವ ಅವರು, ಯುವ ಪೀಳಿಗೆಗೆ ಮುಂದಾಳತ್ವ ವಹಿಸುವ ಪ್ರಕ್ರಿಯೆಗೆ ತಮ್ಮನ್ನು ಸೇರಿ ಹಿರಿಯರ ಬೆಂಬಲದಿಂದ ವೇಗಗೊಳಿಸಬೇಕೆಂದು ಎಂದು 64 ವರ್ಷದ ಅಂಬಾನಿ ಹೇಳಿದ್ದಾರೆ.
ರಿಲಯನ್ಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ರಿಲಯನ್ಸ್ ಫ್ಯಾಮಿಲಿ ಡೇನಲ್ಲಿ ಮಾತನಾಡಿದ ಅವರು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಂದಿನ ವರ್ಷಗಳಲ್ಲಿ ವಿಶ್ವದ ಬಲಿಷ್ಠ ಮತ್ತು ಅತ್ಯಂತ ಪ್ರತಿಷ್ಠಿತ ಭಾರತೀಯ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಒಂದಾಗಲಿದೆ ಎಂದರು. ಗ್ರೀನ್ ಎನರ್ಜಿ ವಲಯ, ಚಿಲ್ಲರೆ ವ್ಯಾಪಾರ ಹಾಗೂ ಟೆಲಿಕಾಂ ವ್ಯವಹಾರವು ಅಭೂತಪೂರ್ವ ಎತ್ತರಕ್ಕೆ ತಲುಪುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿದ್ದಾರೆ.
ದೊಡ್ಡ ಕನಸುಗಳು ಮತ್ತು ಅಸಾಧ್ಯವೆಂದು ತೋರುವ ಗುರಿಗಳನ್ನು ಸಾಧಿಸುವುದು ಸರಿಯಾದ ನಾಯಕತ್ವದ ಲಕ್ಷಣವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಈಗ ಮಹತ್ವದ ನಾಯಕತ್ವ ಪರಿವರ್ತನೆಯ ಪ್ರಕ್ರಿಯೆಯಲ್ಲಿದೆ ಎಂದಿದ್ದಾರೆ.
ಇದನ್ನೂ ಓದಿ: ಇ-ಫೈಲಿಂಗ್ ಮೂಲಕ ಈವರೆಗೆ 4.67 ಕೋಟಿ ಮಂದಿಯಿಂದ ಆದಾಯ ತೆರಿಗೆ ಸಲ್ಲಿಕೆ