ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಸರ್ಕಾರದ ಉದ್ದೇಶಿತ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಕುರಿತು ಟೀಕಿಸುವವರನ್ನು 'ವೃತ್ತಿಪರ ನಿರಾಶಾವಾದಿಗಳು' ಎಂದು ಅಣಕವಾಡಿದ್ದಾರೆ.
2019-20ರ ಮುಂಗಡ ಪತ್ರದಲ್ಲಿ 2024-25ರ ವೇಳೆಗೆ ದೇಶದ ಆರ್ಥಿಕತೆಯನ್ನು ₹ 342 ಲಕ್ಷ ಕೋಟಿಗೆ ( 5 ಟ್ರಿಲಿಯನ್ ಡಾಲರ್) ಹೆಚ್ಚಿಸುವ ಗುರಿಯನ್ನು ಘೋಷಿಸಿದ್ದರು. ಈ ನಡೆಯನ್ನು ಕೆಲವರು ಟೀಕಿಸಿದ್ದರು.
ಸರ್ಕಾರ ಯಾಕೆ ಇಂತಹ ಗುರಿಯನ್ನು ನಿಗದಿಪಡಿಸಿದೆ, ಇದರ ಅವಶ್ಯಕತೆ ಏನು, ಇದನ್ನೆಲ್ಲಾ ಏಕೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸುವ ಕೆಲವು ಜನರಿದ್ದಾರೆ. ಈ ಜನರನ್ನು ವೃತ್ತಿಪರ ನಿರಾಶಾವಾದಿಗಳು ಎಂದು ಕರೆಯಬೇಕು ಎಂದು ಉತ್ತರ ಪ್ರದೇಶದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಿರುಗೇಟು ಕೊಟ್ಟಿದ್ದಾರೆ.
ವೃತ್ತಿಪರ ನಿರಾಶಾವಾದಿಗಳು ಸಾಮಾನ್ಯ ಜನರಿಗಿಂತ ಭಿನ್ನರು. ಸಮಸ್ಯೆಯಿರುವ ನೀವು ಸಾಮಾನ್ಯ ಮನುಷ್ಯರ ಬಳಿಗೆ ಹೋದರೆ, ಅವರು ನಿಮಗೆ ಪರಿಹಾರವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಾರೆ. ಆದರೆ, ನೀವು ಈ ನಿರಾಶಾವಾದಿಗಳ ಬಳಿಗೆ ಹೋದರೆ, ಅವರು ಅದನ್ನೇ ಬೆದರಿಕೆಯನ್ನಾಗಿ ಪರಿವರ್ತಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.