ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿವೇಕಾನಂದರ ಹೆಸರನ್ನು ಪ್ರಸ್ತಾಪಿಸಿ ಬಂಗಾಳದ ವ್ಯವಹಾರ ಪುನರುಜ್ಜೀವನದ ಬಗ್ಗೆ ಕರೆಕೊಟ್ಟರು.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ನ (ಐಸಿಸಿ) 95ನೇ ವಾರ್ಷಿಕ ಅಧಿವೇಶನದ ಉದ್ಘಾಟನಾ ಭಾಷಣ ಮಾಡಿದ ಮೋದಿ, ಭಾರತವು ಸ್ವಾವಲಂಬಿಯಾಗುವ ಸಮಯ ಬಂದಿದೆ. ಸ್ವಾವಲಂಬಿ ಭಾರತವೇ ಮುಂದಿನ ದಾರಿ ಆಗಬೇಕಿದೆ. ಭಾರತವನ್ನು ಆತ್ಮ ನಿರ್ಭರ ದೇಶವನ್ನಾಗಿ ಮಾಡಲು ಸ್ವಾಮಿ ವಿವೇಕಾನಂದರು ಸೂಚಿಸಿದ ಮಾರ್ಗದಲ್ಲಿ ನಮ್ಮ ಸರ್ಕಾರ ಮುನ್ನಡೆಯುತ್ತದೆ ಎಂದು ಹೇಳಿದರು.
ಉತ್ಪಾದನಾ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ಮೂಲಕ ಬಂಗಾಳವು ಮುನ್ನಡೆ ಸಾಧಿಸಬೇಕು. ಈ ದೇಶದ ಪ್ರತಿಯೊಬ್ಬ ನಾಗರಿಕರು ಈ ಬಿಕ್ಕಟ್ಟನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಲು ನಿರ್ಧರಿಸಿದ್ದಾರೆ. ಇದನ್ನು ನಾವು ರಾಷ್ಟ್ರದ ಪ್ರಮುಖ ತಿರುವಾಗಿ ಮಾಡಬೇಕಾಗಿದೆ. ಆ ಮಹತ್ವದ ತಿರುವೇ ಸ್ವಾವಲಂಬಿ ಭಾರತ ಎಂದರು.
ಮೋದಿ ಅವರು ಸ್ವಾಮಿ ವಿವೇಕಾನಂದರನ್ನು ಉಲ್ಲೇಖಿಸಿ, ಉತ್ಪಾದನಾ ಕ್ಷೇತ್ರದಲ್ಲಿ ನಾವು ಬಂಗಾಳದ ಐತಿಹಾಸಿಕ ಶ್ರೇಷ್ಠತೆಯನ್ನು ಪುನರುಜ್ಜೀವನ ಗೊಳಿಸಬೇಕಾಗಿದೆ. 'ಬಂಗಾಳ ಇಂದು ಏನು ಯೋಚಿಸುತ್ತದೆಯೋ ಭಾರತ ಅದನ್ನು ನಾಳೆ ಯೋಚಿಸುತ್ತದೆ' ಎಂಬುದನ್ನು ನಾವು ಯಾವಾಗಲೂ ಕೇಳಿದ್ದೇವೆ. ಇದರಿಂದ ನಾವು ಸ್ಫೂರ್ತಿ ಪಡೆದು ಒಟ್ಟಾಗಿ ಮುಂದುವರಿಯಬೇಕು ಎಂದು ಕರೆಕೊಟ್ಟರು.
ಸೆಣಬಿನ ಉದ್ಯಮವನ್ನು ಪುನರುಜ್ಜೀವನಗೊಳಿಸಲು ಸಿಂಗಲ್ ಯೂಸ್ ಪ್ಲಾಸ್ಟಿಕ್ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನವನ್ನು ಬಂಗಾಳವು ಬಳಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.