ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಾದರಿ ಬಾಡಿಗೆ ಕಾಯಿದೆಯನ್ನು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಲು ಮತ್ತು ಹೊಸ ಕಾಯಿದೆ ತರುವ ಅಥವಾ ಹಾಲಿ ಇರುವ ಬಾಡಿಗೆ ಕಾಯಿದೆಗೆ ಸೂಕ್ತ ತಿದ್ದುಪಡಿ ತರುವ ಮೂಲಕ ಅಳವಡಿಸಿಕೊಳ್ಳಲು ತನ್ನ ಅನುಮೋದನೆ ನೀಡಿದೆ.
ಇದು ದೇಶಾದ್ಯಂತ ಬಾಡಿಗೆ ಮನೆಗೆ ಸಂಬಂಧಿಸಿದಂತೆ ಒಟ್ಟಾರೆ ಕಾನೂನು ಚೌಕಟ್ಟು ಒದಗಿಸಲು ನೆರವಾಗುತ್ತದೆ. ಇದು ಅದರ ಒಟ್ಟಾರೆ ವೃದ್ಧಿಗೂ ನೆರವಾಗುತ್ತದೆ.
ಮಾದರಿ ಬಾಡಿಗೆ ಕಾಯಿದೆ ದೇಶದಲ್ಲಿ ಚಲನಶೀಲ, ಸುಸ್ಥಿರ ಮತ್ತು ಸಮಗ್ರ ಬಾಡಿಗೆ ಮನೆ ಮಾರುಕಟ್ಟೆ ರೂಪಿಸುವ ಗುರಿ ಹೊಂದಿದೆ. ಇದು ಎಲ್ಲ ಆದಾಯ ಗುಂಪುಗಳಿಗೆ ಸಾಕಷ್ಟು ಬಾಡಿಗೆ ವಸತಿ ಸೌಲಭ್ಯವನ್ನು ರೂಪಿಸಲು ಅನುವು ಮಾಡಿಕೊಡುತ್ತದೆ ಮತ್ತು ಆ ಮೂಲಕ ಮನೆಯಿಲ್ಲ ಎಂಬ ಸಮಸ್ಯೆಯನ್ನು ಪರಿಹರಿಸುತ್ತದೆ. ಮಾದರಿ ಬಾಡಿಗೆ ಕಾಯ್ದೆಯು ಬಾಡಿಗೆ ಮನೆಗಳನ್ನು ಕ್ರಮೇಣ ಔಪಚಾರಿಕ ಮಾರುಕಟ್ಟೆಯತ್ತ ವರ್ಗಾಯಿಸುವ ಮೂಲಕ ಸಾಂಸ್ಥಿಕಗೊಳಿಸಲು ಅನುವು ಮಾಡಿಕೊಡುತ್ತದೆ ಎಂದಿದೆ.
ಮಾದರಿ ಬಾಡಿಗೆ ಕಾಯಿದೆ ಬಾಡಿಗೆ ವಸತಿ ಉದ್ದೇಶಗಳಿಗಾಗಿ ಖಾಲಿ ಇರುವ ಮನೆಗಳನ್ನು ಬಿಡುಗಡೆ ಮಾಡಲು ಅನುಕೂಲವಾಗುತ್ತದೆ. ಭಾರಿ ವಸತಿ ಕೊರತೆಯನ್ನು ನೀಗಿಸಲು ವ್ಯಾಪಾರಿ ಮಾದರಿಯಲ್ಲಿ ಬಾಡಿಗೆ ವಸತಿಗಳಲ್ಲಿ ಖಾಸಗಿ ಭಾಗವಹಿಸುವಿಕೆಗೆ ಇದು ಉತ್ತೇಜನ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.