ನವದೆಹಲಿ: ಭಾರತೀಯ ಜೀವನಾಡಿ ಎಂದೇ ಕರೆಯಲ್ಪಡುವ ರೈಲ್ವೆಯಲ್ಲಿ ದೊಡ್ಡ ಮಾರ್ಪಾಡು ತರಲು ಇಲಾಖೆ ಚಿಂತಿಸಿದ್ದು, ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ರೈಲ್ವೆ ಸಚಿವಾಲಯ ಮತ್ತು ರೈಲ್ವೆ ಇಲಾಖೆಯ ಈಗಾಗಲೇ ಎಲ್ಲ ವಲಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ಇದರ ಅನ್ವಯ 55 ವರ್ಷ ದಾಟಿದ ಮತ್ತು 2020ಕ್ಕೆ ರೈಲ್ವೆಯಲ್ಲಿ 30 ವರ್ಷ ಸೇವೆ ಸಲ್ಲಿಸಿದವರು ಸ್ವಯಂ ನಿವೃತ್ತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ಎಲ್ಲ ವಲಯ ಮುಖ್ಯಸ್ಥರು ಉದ್ಯೋಗಿಗಳ ಕಾರ್ಯ ವೈಖರಿ ಬಗ್ಗೆ ದಾಖಲೀಕರಣ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಕಾರ್ಯ ವೈಖರಿಯಲ್ಲಿ ಉದ್ಯೋಗಿ ಮಾನಸಿಕ ಸ್ಥಿಮಿತ, ಹಾಜರಾತಿ ಹಾಗೂ ಉದ್ಯೋಗ ಸ್ಥಳದ ಶಿಸ್ತು ಮಾನದಂಡವಾಗಲಿದೆ.
ಪತ್ರವನ್ನು ಜುಲೈ 27ರಂದು ಕಳುಹಿಸಲಾಗಿದ್ದು ಆಗಸ್ಟ್ 9ರ ಒಳಗಾಗಿ ವಲಯ ಮುಖ್ಯಸ್ಥರು ಉದ್ಯೋಗಿಗಳ ಕಾರ್ಯಕ್ಷಮತೆಯ ವರದಿಯನ್ನು ಕಳುಹಿಸಿಕೊಡುವಂತೆ ಇಲಾಖೆ ಹಾಗೂ ಸಚಿವಾಲಯ ಹೇಳಿದೆ.
ಭಾರತೀಯ ರೈಲ್ವೆಯ ನೂತನ ನಿಯಮದಿಂದ ದೇಶದಲ್ಲಿರುವ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ 13 ಲಕ್ಷದಿಂದ 10 ಲಕ್ಷಕ್ಕೆ ಇಳಿಕೆಯಾಗಲಿದೆ.