ನವದೆಹಲಿ: ಕೊರೊನಾ ವೈರಸ್ ತಡೆಗಾಗಿ ನಡೀತಿರುವ ಲಾಕ್ಡೌನ್ನಿಂದಾಗಿ ವಿವಿಧ ಚಿಲ್ಲರೆ ವ್ಯಾಪಾರಿಗಳಿಂದ ಸುಮಾರು 80,000 ಉದ್ಯೋಗಗಳು ಕಡಿತಗೊಳ್ಳುವ ನಿರೀಕ್ಷೆಯಿದೆ ಎಂದು ಕೈಗಾರಿಕಾ ಸಂಸ್ಥೆ ರೈ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ರೈ) 768 ಚಿಲ್ಲರೆ ವ್ಯಾಪಾರಿಗಳ ಸಮೀಕ್ಷೆಯನ್ನು ನಡೆಸಿದ್ದು, ಇದು ಭಾರತದಾದ್ಯಂತ 3,92,963 ಜನರಿಗೆ ಉದ್ಯೋಗ ನೀಡಿದೆ. ಕೋವಿಡ್-19 ವರ್ತಕರ ವ್ಯವಹಾರ ಮತ್ತು ಮಾನವಶಕ್ತಿಯ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಿದೆ.
ಮುಂದಿನ ದಿನಗಳಲ್ಲಿ ಸಣ್ಣ ಚಿಲ್ಲರೆ ವ್ಯಾಪಾರಿಗಳು ತಮ್ಮ ಮಾನವಶಕ್ತಿಯಲ್ಲಿ ಶೇ.30ರಷ್ಟು ಕಡಿತಗೊಳಿಸುವ ನಿರೀಕ್ಷೆಯಲ್ಲಿದ್ದಾರೆ. ಈ ಸಂಖ್ಯೆಯಲ್ಲಿ ಮಧ್ಯಮ (ಗಾತ್ರದ) ಚಿಲ್ಲರೆ ವ್ಯಾಪಾರಿಗಳ ಶೇ.12 ಮತ್ತು ದೊಡ್ಡ ಚಿಲ್ಲರೆ ವ್ಯಾಪಾರಿಗಳದ್ದು ಶೇ.5ಕ್ಕೆ ತಗ್ಗಲಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡು ಪ್ರತಿಕ್ರಿಯಿಸಿದ ಚಿಲ್ಲರೆ ವ್ಯಾಪಾರಿಗಳಲ್ಲಿ ಶೇ.20ರಷ್ಟು ಮಾನವ ಸಂಪನ್ಮೂಲ ತೆಗೆದು ಹಾಕುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಸಮೀಕ್ಷೆಯಲ್ಲಿ ಭಾಗಿ ಆಗಿರುವ ವರ್ತಕರು ಶೇ.20ರಷ್ಟು (78,592) ಉದ್ಯೋಗಿಗಳನ್ನು ಮರು ನೇಮಕಾತಿಯ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಮಾರ್ಚ್ 25ರಂದು ಲಾಕ್‌ಡೌನ್ ವಿಧಿಸಿದ ಬಳಿಕ ಶೇ.95ಕ್ಕಿಂತಲೂ ಅಧಿಕ ಆಹಾರೇತರ ಚಿಲ್ಲರೆ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ಮುಚ್ಚಿದ್ದಾರೆ. ಈ ಅವಧಿಯಲ್ಲಿ ಯಾವುದೇ ಆದಾಯ ಗಳಿಸುತ್ತಿಲ್ಲ. ಮುಂದಿನ ಆರು ತಿಂಗಳಲ್ಲಿ ಕಳೆದ ವರ್ಷದ ಆದಾಯಕ್ಕಿಂತ ಶೇ.40ರಷ್ಟು ಮಾತ್ರ ಗಳಿಸುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಹೇಳಿದೆ.
ಲಾಕ್ಡೌನ್ನಿಂದ ಆಹಾರೇತರ ವಹಿವಾಟು ಸ್ಥಗಿತಗೊಂಡಿದೆ. ಇದು ಆದಾಯ ನಷ್ಟಕ್ಕೆ ಕಾರಣವಾಗಿದೆ. ವ್ಯವಹಾರದ ದೃಷ್ಟಿಕೋನದಿಂದ 70 ಪ್ರತಿಶತದಷ್ಟು ಚಿಲ್ಲರೆ ವ್ಯಾಪಾರಿಗಳು 6 ತಿಂಗಳಿಗಿಂತ ಹೆಚ್ಚು ಅವಧಿಯಲ್ಲಿ ವ್ಯಾಪಾರ ಚೇತರಿಕೆ ಸಂಭವಿಸುತ್ತದೆ ಎಂಬ ಆಶಾಭಾವ ಹೊಂದಿದ್ದಾರೆ. ಶೇ.20ರಷ್ಟು ಮಂದಿ ಇದು 1 ವರ್ಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುಲಿದೆ ಎಂದಿದ್ದಾರೆ.