ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯದ ಸೂಚನೆಯಂತೆ ಕೃಷಿಕರಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ತ್ವರಿತವಾಗಿ ಸಾಲ ನೀಡುವ ಉದ್ದೇಶದಿಂದ ದೇಶದ ಆಯ್ದ 200ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮೊದಲ ಹಂತದ ಸಾಲ ಮೇಳ ಇಂದಿನಿಂದ ಆರಂಭವಾಗಿದೆ.
ನಾಲ್ಕು ದಿನಗಳವರೆಗೆ ನಡೆಯುವ ಈ ಸಾಲ ಮೇಳದಲ್ಲಿ ಗ್ರಾಹಕರಿಗೆ ರಿಟೇಲ್ ಸಾಲ, ಗೃಹ, ಕಾರು, ಕೃಷಿ, ಶೈಕ್ಷಣಿಕ, ಸಣ್ಣ ಉದ್ಯಮ ಮತ್ತು ವೈಯಕ್ತಿಕ ವಿಭಾಗದಲ್ಲಿ ಸ್ಥಳದಲ್ಲೇ ಸಾಲ ನೀಡಲಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕಾರ್ಪೊರೇಷನ್ ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕ್‌ಗಳು ಈ ಮೇಳದಲ್ಲಿ ಭಾಗವಹಿಸಲಿವೆ. ಸಾಲು-ಸಾಲು ಹಬ್ಬಗಳ ಸಂದರ್ಭದಲ್ಲಿ ಜನರಿಗೆ ಅನುಕೂಲ ಒದಗಿಸಿಕೊಡುವ ಉದ್ದೇಶದಿಂದ ಈ ಸಾಲ ಮೇಳ ನಡೆಸಲು ನಿರ್ಧರಿಸಲಾಗಿದೆ. ಜೊತೆಗೆ ಆರ್ಥಿಕತೆ ಚೇತರಿಸುವ ಪರೋಕ್ಷ ಉದ್ದೇಶವೂ ಇದರ ಹಿಂದಿದೆ ಎನ್ನಲಾಗಿದೆ.
ಹಣಕಾಸು ಸಚಿವಾಲಯದ ಈ ಉದ್ದೇಶಕ್ಕೆ ಖಾಸಗಿ ವಲಯದ ಬ್ಯಾಂಕ್‌ಗಳೂ ಬೆಂಬಲ ವ್ಯಕ್ತಪಡಿಸಿವೆ. ಅವುಗಳು ಸ್ಥಳದಲ್ಲೇ ಸಾಲವನ್ನು ವಿತರಿಸಲಿವೆ. ಗ್ರಾಹಕರು ಉಳಿತಾಯ ಹಾಗೂ ಇತರ ಖಾತೆಗಳನ್ನು ಸಹ ತೆರೆಯುವ ಅವಕಾಶವಿದೆ. ಎರಡನೇ ಹಂತದ ಸಾಲ ಮೇಳವು ದೀಪಾವಳಿಗೂ ಮುನ್ನ ಅಕ್ಟೋಬರ್ 21ರಿಂದ ಅ.25ರ ವರೆಗೆ ನಡೆಯಲಿದೆ.