ನವದೆಹಲಿ: ಕೇಂದ್ರ ಸರ್ಕಾರವು 2030ರ ವೇಳೆಗೆ ರೈಲ್ವೆ ಇಲಾಖೆಯಲ್ಲಿ ₹ 50 ಲಕ್ಷ ಕೋಟಿ ಹೂಡಿಕೆ ಮಾಡುವತ್ತ ದೃಷ್ಟಿ ನೆಟ್ಟಿದೆ ಎಂದು ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಬಿಜೆಪಿ ಸದಸ್ಯತ್ವ ಅಭಿಯಾನ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 65 ವರ್ಷಗಳಲ್ಲಿ ಸಾಕಷ್ಟು ಹೂಡಿಕೆ ಅಭಾವದಿಂದ ರೈಲ್ವೆ ಮೂಲಸೌಕರ್ಯದಲ್ಲಿ ಶೇ. 30ರಷ್ಟು ಮಾತ್ರವೇ ಏರಿಕೆಯಾಗಿದೆ. ಮುಂದಿನ 10 ವರ್ಷಗಳಲ್ಲಿ 50 ಲಕ್ಷ ಕೋಟಿ ರೂ. ಹೂಡಿ ವಿಶ್ವದರ್ಜೆಯ ರೈಲ್ವೆಯಾಗಿಸಿ ಪ್ರಯಾಣಿಕರ ಸುರಕ್ಷಾ ಸ್ನೇಹಿ, ಸಂಪರ್ಕ ಜಾಲ ವಿಸ್ತರಣೆ ಹಾಗೂ ಸರಕು ರವಾನೆ ಪ್ರಮಾಣ ಅಧಿಕಗೊಳಿಸಲಾಗುವುದು ಎಂದರು.
65 ವರ್ಷಗಳಲ್ಲಿ ಸಾಕಷ್ಟು ಹೂಡಿಕೆ ಅಭಾವದಿಂದ ರೈಲ್ವೆ ಮೂಲಸೌಕರ್ಯದಲ್ಲಿ ಶೇ. 30ರಷ್ಟು ಮಾತ್ರವೇ ಏರಿಕೆಯಾಗಿದ್ದರೇ ಸರಕು ಸಾಗಣೆ ಮತ್ತು ಪ್ರಯಾಣಿಕರ ದಟ್ಟಣೆ ಪ್ರಮಾಣ ಶೇ.1,500ರಷ್ಟು ಹೆಚ್ಚಳವಾಗಿದೆ. ಹೀಗಾಗಿ, ಸಂಚಾರದ ವೇಳೆ ಪ್ರಯಾಣಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಕೊಂಕಣ ರೈಲ್ವೆ ಕಾರ್ಪೊಪರೇಷನ್ನ (ಕೆಆರ್ಸಿಎಲ್) ಗೋವಾ ಮುಖಾಂತರ ಮುಂಬೈ-ಮಂಗಳೂರು ನಡುವಿನ ಮಾರ್ಗವನ್ನು ಒಂದೂವರೆ ವರ್ಷದೊಳಗೆ ವಿದ್ಯುದೀಕರಣಗೊಳಿಸಲಾಗುವುದು. ರೈಲ್ವೆ ಸಚಿವಾಲಯವು ಇದಕ್ಕಾಗಿ ₹ 11,000 ಕೋಟಿ ಅನುಮೋದಿಸಿದೆ ಎಂದು ಗೋಯಲ್ ಮಾಹಿತಿ ನೀಡಿದ್ದಾರೆ.
ಮಂಗಳೂರು-ಮುಂಬೈನ ಕೊಂಕಣ ರೈಲ್ವೆ ಮಾರ್ಗವನ್ನು ದ್ವಿಪಥಗೊಳಿಸಿದೇ ವಿದ್ಯುದೀಕರಣಕ್ಕೆ ಒಳಪಡಿಸಲಾಗುವುದು. ಇದರಿಂದ ಪರಿಸರಕ್ಕೆ ಧಕ್ಕೆಯಾಗುವುದಿಲ್ಲ ಹಾಗೂ ರೈಲುಗಳ ವೇಗದ ಮಿತಿ ಕೂಡ ಏರಿಕೆ ಆಗಲಿದೆ ಎಂದರು.