ನವದೆಹಲಿ: ಡಿಜಿಟಲ್ ವೇದಿಕೆಗಳನ್ನು ಮತ್ತು ದೇಶೀಯವಾಗಿ ಅಭಿವೃದ್ಧಿಪಡಿಸಿದ ಮುಂದಿನ ಪೀಳಿಗೆಗೆ 5 ಜಿ ಸ್ಟ್ಯಾಕ್ ಪರಿಚಯಿಸುವ ಪ್ರಕ್ರಿಯೆಯನ್ನು ಜಿಯೋ ತ್ವರಿತಗೊಳಿಸುತ್ತಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ. ಇದು, ಜಾಗತಿಕ ಡಿಜಿಟಲ್ ಕ್ರಾಂತಿಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂಬುದನ್ನು ವರದಿ ಎತ್ತಿ ತೋರಿಸಿದೆ.
ರಿಲಯನ್ಸ್ ಜಿಯೋ ತನ್ನ ಮುಂದಿನ 300 ಮಿಲಿಯನ್ ಮೊಬೈಲ್ ಬ್ರಾಡ್‌ಬ್ಯಾಂಡ್ ಚಂದಾದಾರರಿಗೆ, 50 ಮಿಲಿಯನ್ ಫೈಬರ್ ಹೋಮ್ಸ್ ಮತ್ತು ಮತ್ತು 50 ಮಿಲಿಯನ್ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವ್ಯವಹಾರ ನಡೆಸುವ ಗ್ರಾಹಕರಿಗೆ ಅಗತ್ಯ ಇರುವಷ್ಟು ನೆಟ್‌ವರ್ಕ್ ಸಾಮರ್ಥ್ಯವನ್ನು ನಿರ್ಮಿಸಿದೆ ಎಂದು ವರದಿಯಲ್ಲಿ ಹೇಳಿಕೊಂಡಿದೆ.
ಕ್ವಾಲ್ಕಾಮ್ ಮತ್ತು ಜಿಯೋ ಭಾರತದಲ್ಲಿ 5 ಜಿ ಪ್ರಯೋಗಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ಜಿಯೋ 5 ಜಿ ವಿಭಾಗದಲ್ಲಿ, 1 ಜಿಬಿಪಿಎಸ್ ಮೈಲಿಗಲ್ಲು ಸಾಧಿಸಿದೆ ಎಂದು ರಿಲಯನ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ವಾರ್ಷಿಕ ವರದಿಯಲ್ಲಿ ಘೋಷಿಸಿದ್ದಾರೆ.
ಜೆಪಿಎಲ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ರಾಡಿಸಿಸ್ ಕಾರ್ಪೊರೇಷನ್‌ನೊಂದಿಗೆ ಜಿಯೋ ಮತ್ತು ಕ್ವಾಲ್ಕಾಮ್, ವರ್ಚುವಲೈಸ್ಡ್ ರಾನ್ (ವಿಆರ್‌ಎಎನ್) ಜತೆ ಮುಕ್ತ ಮತ್ತು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವಂತಹ ಇಂಟರ್ಫೇಸ್-ಕಂಪ್ಲೈಂಟ್ ಆರ್ಕಿಟೆಕ್ಚರ್-ಆಧಾರಿತ 5 ಜಿ ಸೊಲ್ಯೂಷನ್ ಅಭಿವೃದ್ಧಿಪಡಿಸಿದೆ ಎಂದು ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಭಾರತದಲ್ಲಿ 5 ಜಿ ನೆಟ್‌ವರ್ಕ್ ಮೂಲಸೌಕರ್ಯ ಮತ್ತು ಸೇವೆಗಳು ವಿಭಾಗದಲ್ಲಿ ಸ್ವದೇಶಿ ಅಭಿವೃದ್ಧಿ ಮತ್ತು ಅನುಷ್ಠಾನವನ್ನು ವೇಗಗೊಳಿಸುತ್ತದೆ.
ಜಿಯೋ 5 ಜಿ ಕೋರ್ ನೆಟ್‌ವರ್ಕ್ ಮತ್ತು 5 ಜಿ ಸ್ಮಾರ್ಟ್‌ಫೋನ್‌ಗಳಲ್ಲಿ, 5 ಜಿ ರಾನ್ ಪ್ಲಾಟ್‌ಫಾರ್ಮ್ 1 ಜಿಬಿಪಿಎಸ್ ಮೈಲಿಗಲ್ಲನ್ನು ದಾಟಿದೆ ಎಂದು ವರದಿ ತಿಳಿಸಿದೆ. ಈ ಸಾಧನೆಯು ಜಿಯೋನ 5 ಜಿ ಗುಣಮಟ್ಟಗಳನ್ನು ಮಾತ್ರವಲ್ಲ, ಜಿಯೋ ಮತ್ತು ಭಾರತವು 5 ಜಿ ಎನ್ಆರ್ ಉತ್ಪನ್ನಗಳ ವಿಭಾಗದಲ್ಲಿ ಪ್ರವೇಶಿಸುತ್ತಿರುವುದನ್ನು ಸೂಚಿಸುತ್ತದೆ.
ಭಾರತದಲ್ಲಿ ಅತಿದೊಡ್ಡ ಮತ್ತು ಸುಧಾರಿತ ಡಿಜಿಟಲ್ ಮತ್ತು ಸಂಪರ್ಕ ವ್ಯವಸ್ಥೆಯನ್ನು ಸೃಷ್ಟಿಸುವ ಉದ್ದೇಶದೊಂದಿಗೆ ಜಿಯೋ ತನ್ನ ಆರಂಭದಿಂದಲೂ ಭಾರತದಲ್ಲಿ 50 ಬಿಲಿಯನ್ ಡಾಲರ್‌ಗಳಷ್ಟು ಹೂಡಿಕೆ ಮಾಡಿದೆ. ಇದರೊಂದಿಗೆ ವ್ಯಾಪಕವಾದ ಹಲವು ಆ್ಯಪ್ಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ.
426 ಮಿಲಿಯನ್ ಗ್ರಾಹಕರು
"ಭಾರತವನ್ನು ವಿಶ್ವದ ಮುಂಚೂಣಿ ಡಿಜಿಟಲ್ ಸಮಾಜ ಮತ್ತು ಆರ್ಥಿಕತೆಯಾಗಿ ಬಲವರ್ಧನೆ ಪಡಿಸಲು ಜಿಯೋ ಸದ್ಯ ಅಸ್ತಿತ್ವದಲ್ಲಿರುವ 426 ಮಿಲಿಯನ್ ಗ್ರಾಹಕರ ಬಳಕೆ ಅನುಭವವನ್ನು ವೃದ್ಧಿಸುತ್ತಿದೆ. ಮಾತ್ರವಲ್ಲದೇ ಮುಂದಿನ 300 ಮಿಲಿಯನ್ ಹೊಸ ಬಳಕೆದಾರರು, 50 ಮಿಲಿಯನ್ ಮನೆಗಳು ಮತ್ತು 50 ಮಿಲಿಯನ್ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವ್ಯವಹಾರ ನಡೆಸುತ್ತಿರುವವರನ್ನು ಡಿಜಿಟಲ್ ಕಡೆಗೆ ಪರಿವರ್ತನೆಗೊಳಿಸುವುದನ್ನು ಚುರುಕುಗೊಳಿಸಿದೆ ಎಂದು ಜಿಯೋ ಹೇಳಿಕೊಂಡಿದೆ.
2020-21ರ ಹಣಕಾಸಿನ ವರ್ಷದಲ್ಲಿ, ಜಿಯೋ ಪ್ಲಾಟ್‌ಫಾರ್ಮ್‌ಗಳು (ಜೆಪಿಎಲ್) 13 ಜಾಗತಿಕ ಪ್ರಮುಖ ಹೂಡಿಕೆದಾರರ ಮೂಲಕ 1,52,056 ಕೋಟಿ ರೂ. ಅನುದಾನ ಸಂಗ್ರಹಿಸಿರುವುದಾಗಿ ವರದಿಯಲ್ಲಿ ತಿಳಿಸಿದೆ.
ಭವಿಷ್ಯದಲ್ಲಿ ಸ್ವಾವಲಂಬನೆ
ಭವಿಷ್ಯದಲ್ಲಿ ಶೀಘ್ರದಲ್ಲಿಯೇ ಸ್ವಾವಲಂಬಿ ಹಾಗೂ ಪರಿಣಾಮಕಾರಿ ಕಡಿಮೆ ವೆಚ್ಚದ ಜಾರಿಗಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಎಂಡ್ ಟು ಎಂಡ್ ಜಿಯೋ 5 ಜಿ ರೇಡಿಯೋ ಮತ್ತು ಕೋರ್ ನೆಟ್‌ವರ್ಕ್ ಸೊಲ್ಯೂಷನ್ ಪರೀಕ್ಷೆಯನ್ನು ಪೂರ್ಣಗೊಳಿಸುವುದು ಮತ್ತೊಂದು ಪ್ರಮುಖ ಅಂಶವಾಗಿದೆ.
ಮುಂದಿನ ಕೆಲವು ವರ್ಷಗಳಲ್ಲಿ, ಜಿಯೋ ದೇಶಾದ್ಯಂತ "ದೃಢವಾದ" ವೈರ್‌ಲೈನ್ ನೆಟ್‌ವರ್ಕ್ ರಚಿಸುವುದರತ್ತ ಗಮನ ಹರಿಸಲಿದೆ. ಪ್ರತಿ ಮನೆ ಮತ್ತು ಉದ್ಯಮಗಳಿಗೆ ಹೆಚ್ಚಿನ ವೇಗದ ಸಂಪರ್ಕ ಮತ್ತು ಡಿಜಿಟಲ್ ಸೇವೆಗಳ ಹಲವು ಕೊಡುಗೆಗಳನ್ನು ನೀಡುವುದಾಗಿ ಭರವಸೆ ನೀಡಿದೆ.
"ಜಿಯೋ ತನ್ನ ಡಿಜಿಟಲ್ ಕೊಡುಗೆಗಳ ಮೂಲಕ ಒಂದು ಶತಕೋಟಿ ಭಾರತೀಯರನ್ನು ತಲುಪಲು ಸಜ್ಜಾಗಿದೆ" ಎಂದು ವರದಿ ಹೇಳಿದೆ.
ಇದನ್ನೂ ಓದಿ: ಮಳೆಗೆ ಮನೆ ಮೇಲ್ಛಾವಣಿ ಕುಸಿತ: ಮಗು ಸಾವು