ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದುಪಡಿಸಿದ ಬಳಿಕ ಕಣಿವೆ ರಾಜ್ಯದಲ್ಲಿ ಕೈಗಾರಿಕೆಗಳನ್ನು ತೆರೆಯಲು ಅನ್ಯ ರಾಜ್ಯದ ಉದ್ಯಮಿಗಳು ಆಸಕ್ತಿ ವ್ಯಕ್ತಪಡಿಸುತ್ತಿದ್ದರು. ಉದ್ದಿಮೆಗಳ ಸ್ಥಾಪನೆಯ ಅನುಕೂಲಕ್ಕಾಗಿ ಏಪ್ರಿಲ್ ತಿಂಗಳಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುತ್ತಿದೆ.
'ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಇದೇ ಪ್ರಥಮ ಬಾರಿಗೆ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಏಪ್ರಿಲ್ ತಿಂಗಳಲ್ಲಿ ಆಯೋಜಿಸಲಾಗುತ್ತಿದೆ' ಎಂದು ಜಮ್ಮು- ಕಾಶ್ಮೀರ ರಾಜ್ಯಪಾಲ ಗಿರೀಶ್ ಚಂದ್ರ ಮುರ್ಮು ತಿಳಿಸಿದ್ದಾರೆ.
ದೆಹಲಿಯಲ್ಲಿ ಹೂಡಿಕೆ ಸಮಾವೇಶದ ಪೂರ್ವಭಾವಿಯಾಗಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಆದರೆ, ಈಗ ಸಂಘಟಿತ ಕ್ರಮಗಳಿಂದಾಗಿ ಭಯೋತ್ಪಾದನೆ ಭೀತಿಯನ್ನು ಕಡಿಮೆ ಮಾಡಲಾಗಿದೆ ಎಂದರು.
ಜನರಿಗೆ ಸಾಮಾನ್ಯ ಜೀವನವನ್ನು ಮರುಸ್ಥಾಪಿಸಲಾಗಿದೆ. ಈಗ ಕಣಿವೆ ರಾಜ್ಯದಲ್ಲಿ ಉಗ್ರರಿಗೆ ಪರಿಸ್ಥಿತಿಯು ಈ ಹಿಂದಿನಂತೆ ಇಲ್ಲ. ಅಂತರ್ಜಾಲದ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಕಾರ್ಯದರ್ಶಿ ಬಿ.ವಿ.ಆರ್. ಸುಬ್ರಹ್ಮಣ್ಯಂ ಹೇಳಿದರು.