ನವದೆಹಲಿ: ಕಚ್ಚಾ ವಸ್ತುಗಳ ಕೊರತೆ, ಚೀನಾದಂತಹ ಪ್ರಮುಖ ವಿದೇಶಿ ಮಾರುಕಟ್ಟೆಗಳಲ್ಲಿ ಬಲವಾದ ಬೇಡಿಕೆಯ ಕಾರಣಗಳಿಂದ ದೇಶದಲ್ಲಿ ಉಕ್ಕಿನ ಬೆಲೆಗಳು ಗಗನಮುಖಿಯಾಗಿವೆ.
ಮೋತಿಲಾಲ್ ಓಸ್ವಾಲ್ ಇನ್‌ಸ್ಟಿಟ್ಯೂಶನಲ್ ಈಕ್ವಿಟೀಸ್‌ನ ಇತ್ತೀಚಿನ ವರದಿಯ ಪ್ರಕಾರ, ದೇಶೀಯ ಉಕ್ಕಿನ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಟನ್‌ಗೆ 57,250 ರೂ. ತಲುಪಿವೆ. ಕಳೆದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಹಾಟ್ ರೋಲರ್ ಕಾಯಿಲ್ ಮತ್ತು ಪ್ರೈಮರಿ ರಿಬಾರ್ ಬೆಲೆಗಳು ಕ್ರಮವಾಗಿ ಟನ್‌ಗೆ 12,000 ಮತ್ತು 15,500 ರೂ.ಯಷ್ಟಿದ್ದವು.
ಚೀನಾದಿಂದ ಬೇಡಿಕೆ ಏರಿಕೆ
ಚೀನಾದಲ್ಲಿ ಹೆಚ್ಚುತ್ತಿರುವ ಬೇಡಿಕೆಯು ಉಕ್ಕಿನ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಸಾಂಕ್ರಾಮಿಕ ರೋಗದ ಪ್ರಾರಂಭದ ನಂತರ ಮೊದಲ ಬಾರಿಗೆ ಉಕ್ಕಿನ ರಫ್ತು ವರ್ಷದಿಂದ ವರ್ಷಕ್ಕೆ ಧನಾತ್ಮಕವಾಗಿದೆ.
ಚೀನಾದ ದೇಶೀಯ ಉಕ್ಕಿನ ಬೆಲೆಗಳು ಪ್ರಬಲವಾಗಿದ್ದು, ಒಂಬತ್ತು ವರ್ಷಗಳಲ್ಲಿ ಗರಿಷ್ಠ ಮಟ್ಟದಲ್ಲಿವೆ. ಪ್ರಾದೇಶಿಕ ಮತ್ತು ಭಾರತೀಯ ಉಕ್ಕಿನ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ. ಚೀನಾದಲ್ಲಿನ ಬೇಡಿಕೆ ಇದೇ ರೀತಿ ಮುಂದುವರಿದರೆ ಲೋಹಗಳ ಬೆಲೆಗಳ ಓಟವು ಮುಂಬರುವ ತಿಂಗಳಲ್ಲಿ ಇನ್ನಷ್ಟು ಆವೇಗ ಪಡೆದುಕೊಳ್ಳಬಹುದು.
ಒಡಿಶಾ ಫ್ಯಾಕ್ಟರ್
ಭಾರತೀಯ ಉಕ್ಕಿನ ಪ್ರಬಲ ಜಾಗತಿಕ ಬೇಡಿಕೆಯ ಹೊರತಾಗಿ, ದೇಶದ ಒಟ್ಟು ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಶೇ 55ರಷ್ಟಿರುವ ಒಡಿಶಾದ ಪೂರೈಕೆ ಸಮಸ್ಯೆಗಳು ಕೂಡ ಬೆಲೆಗಳನ್ನು ಹೆಚ್ಚಿಸಿವೆ.
ಕಚ್ಚಾ ವಸ್ತುಗಳ ಪೂರೈಕೆ ಹಾಗೂ ಉಕ್ಕಿನ ಸ್ಥಾವರಗಳ ಬೇಡಿಕೆಗಳು ಹೊಂದಿಕೆಯಾಗುತ್ತಿಲ್ಲ. ಒಡಿಶಾದಲ್ಲಿ ಹರಾಜು ಮಾಡಿದ 19 ಗಣಿಗಳಲ್ಲಿ 6-7 ಮಾತ್ರ ಗಣಿಗಾರಿಕೆ ಕಾರ್ಯಾಚರಣೆ ಪ್ರಾರಂಭಿಸಬಹುದು ಎಂದು ಕ್ರಿಸಿಲ್ ಸಂಶೋಧನಾ ವರದಿ ಸೋಮವಾರ ತಿಳಿಸಿತ್ತು.
ಇದನ್ನೂ ಓದಿ: ಖಾಸಗಿ ಗೌಪ್ಯತೆ ಗೊಂದಲ: ಹೊಸ ಅಪ್ಡೇಟ್ ಗಡುವು ಮುಂದೂಡಿದ ವಾಟ್ಸ್ಆ್ಯಪ್
19 ಗಣಿಗಳು 65-70 ಮಿಲಿಯನ್ ಟನ್ ಕಬ್ಬಿಣದ ಅದಿರನ್ನು ಭಾರತದ ವ್ಯಾಪಾರಿ ಮಾರುಕಟ್ಟೆಗಳಿಗೆ ಮಾರಾಟ ಮಾಡುತ್ತಿದ್ದವು. ಬಿಗಿಯಾದ ಪೂರೈಕೆಯು ದೇಶೀಯ ಕಬ್ಬಿಣದ ಅದಿರಿನ ಬೆಲೆಗೆ ಉತ್ತಮವಾಗಿದ್ದು, ಬೆಲೆಗಳು ಮೇ-ಜೂನ್ ಮಟ್ಟದಿಂದ ಡಿಸೆಂಬರ್‌ನಲ್ಲಿ ಪ್ರತಿ ಟನ್‌ಗೆ 4,360 ರೂ.ಗೆ ಏರಿದೆ ಎಂದು ವರದಿ ಹೇಳಿದೆ.
ಲಾಭ ಹೆಚ್ಚಳ
ರಿಯಲ್ ಎಸ್ಟೇಟ್ ಮತ್ತು ವಾಹನ ಕ್ಷೇತ್ರಗಳಲ್ಲಿನ ಬಲವಾದ ಬೇಡಿಕೆಯ ಹಿನ್ನೆಲೆಯಲ್ಲಿ ಭಾರತೀಯ ಉಕ್ಕು ತಯಾರಕರು ಹೆಚ್ಚಿನ ಬೆಲೆಗಳಿಂದ ಲಾಭ ಪಡೆಯಬಹುದು ಎಂದು ವರದಿಗಳು ಸೂಚಿಸುತ್ತವೆ.