ನವದೆಹಲಿ: ಲಾಕ್ಡೌನ್ ಬಳಿಕ ಸ್ಥಗಿತಗೊಂಡಿರುವ ಅಂತಾರಾಷ್ಟ್ರೀಯ ವಿಮಾನ ಹಾರಾಟ ಸೇವೆಗಳು ಅನ್ಲಾಕ್ 2.0 ವೇಳೆ ಆಯ್ದ ಮಾರ್ಗಗಳಿಗೆ ಪುನಾರಂಭಗೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್ ಮತ್ತು ಇತರ ಕೆಲವು ದೇಶಗಳು ಏರ್ ಇಂಡಿಯಾದ ವಂದೇ ಭಾರತ ಮಿಷನ್ಗೆ ಆಕ್ಷೇಪ ವ್ಯಕ್ತಪಡಿಸಿದ್ದವು. ಪ್ರಯಾಣಿಕರ ಸಾಗಣೆ ಸೇವೆಯಲ್ಲಿ ತಮ್ಮ ವಿಮಾನಗಳಿಗೆ ಅವಕಾಶ ನೀಡುವಂತೆ ವಿನಂತಿಸಿದ ನಂತರ ಹಿಂದಕ್ಕೆ ಸರಿದವು. ಇತ್ತೀಚಿನ ಸರ್ಕಾರಿ ಮೂಲಗಳ ಪ್ರಕಾರ, ಅನ್ಲಾಕ್ 2.0 ಅಡಿಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಅವಕಾಶ ನೀಡಬಹುದು. ಅದು ಆಯ್ದ ಮಾರ್ಗಗಳಿಗೆ ಮಾತ್ರ ಸೀಮಿತವಾಗಲಿದೆ ಎಂದಿವೆ.
ಸರ್ಕಾರದ ಮೂಲಗಳ ಪ್ರಕಾರ, ಜೂನ್ 30ರ ಒಳಗೆ ಗೃಹ ಸಚಿವಾಲಯವು ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ. ಅನ್ಲಾಕ್ 2.0 ಮಾರ್ಗಸೂಚಿಗಳಲ್ಲಿ ಆಯ್ದ ಮಾರ್ಗಗಳಿಗೆ ಅಂತಾರಾಷ್ಟ್ರೀಯ ವಿಮಾನ ಸೇವೆ ಪುನಾರಂಭದ ಆದೇಶಗಳನ್ನು ಕಾಣಬಹುದು.
ಜುಲೈ ವೇಳೆಗೆ ದೆಹಲಿ-ನ್ಯೂಯಾರ್ಕ್, ಮುಂಬೈ-ನ್ಯೂಯಾರ್ಕ್, ದುಬೈ-ದೆಹಲಿ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನ ಹಾರಾಟ ಪುನಾರಂಭಿಸುವ ಸಾಧ್ಯತೆಯಿದೆ. ಇಂಗ್ಲೆಂಡ್, ಫ್ರಾನ್ಸ್ ಮತ್ತು ಜರ್ಮನಿಯ ಕೆಲವು ವಿಮಾನಯಾನ ಸಂಸ್ಥೆಗಳಿಗೆ ಭಾರತಕ್ಕೆ ಮತ್ತು ಹೊರ ಹೋಗುವ ವಿಮಾನಗಳ ನಿರ್ವಹಣೆಗೆ ಅವಕಾಶ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ದೇಶಗಳಿಂದ ಪ್ರಯಾಣದ ಬೇಡಿಕೆ ಕಡಿಮೆಯಾಗದ ಕಾರಣ ಅಮೆರಿಕ, ಯುಕೆ, ಫ್ರಾನ್ಸ್ ಮತ್ತು ಜರ್ಮನಿಯೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಒಪ್ಪಂದ ಸ್ಥಾಪಿಸುವ ನಿರೀಕ್ಷೆಯನ್ನು ಸರ್ಕಾರ ಎದುರು ನೋಡುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ವಕ್ತಾರರು ಮಂಗಳವಾರ ಹೇಳಿದ್ದರು.
ವಿಶೇಷವೆಂದರೆ ಅಮೆರಿಕ, ಇಂಗ್ಲೆಂಡ್, ಯುಎಇ, ಜರ್ಮನಿ, ಫ್ರಾನ್ಸ್, ಇಟಲಿ, ಜಮೈಕಾ ಮತ್ತು ಇತರೆ ಹಲವು ದೇಶಗಳು ಅಂತಾರಾಷ್ಟ್ರೀಯ ವಿಮಾನ ಯಾನಕ್ಕಾಗಿ ತಮ್ಮ ವಾಯುಪ್ರದೇಶವನ್ನು ಮುಕ್ತವಾಗಿರಿಸಿವೆ.