ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಜಾಗತಿಕ ಆರ್ಥಿಕ ಹಿಂಜರಿಕೆಯ ಎಚ್ಚರಿಕೆ ಸೂಚನೆ ನಡುವೆಯೂ ಭಾರತದ ಆರ್ಥಿಕತೆ ಇದನ್ನು ಮೀರಿ ಮುನ್ನುಗುವ ಸಾಧ್ಯತೆ ಇದೆ ಎಂಬ ವರದಿಯನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ನೀಡಿದೆ
ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಂತಹ ಯೋಜನೆ ರೈತರ ಆದಾಯಕ್ಕೆ ಬೆಂಬಲ ನೀಡಲಿದೆ. ಇದು ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಬಳಕೆಯ (ಅನುಭೋಗದ) ಪ್ರಮಾಣ ಬಲಗೊಳ್ಳುವುದರಿಂದ ಪ್ರಸ್ತುತ ಆರ್ಥಿಕ ಬೆಳವಣಿಗೆ ದರದ ವೇಗವು ಶೇ 7.3ಕ್ಕೆ ತಲುಪಲಿದೆ ಎಂದು ಎಡಿಬಿ ಅಂದಾಜಿಸಿದೆ.
ಸಣ್ಣ ರೈತರು ಕೇಂದ್ರದ ಆದಾಯ ಬೆಂಬಲ ಪಡೆಯುವುದರಿಂದ ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಲಿದೆ. ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಸುಸ್ಥಿರ ಬೆಳವಣಿಗೆಯ ಪ್ರಮಾಣವು ಈ ವರ್ಷ ಹಾಗೂ ಮುಂದಿನ ವರ್ಷವೂ ಶೇ 5ರ ಆಸುಪಾಸಿನಲ್ಲಿ ಮುಂದುವರಿಯಲಿದೆ ಎಂದು ತಿಳಿಸಿದೆ.
ದೇಶಿ ಬೇಡಿಕೆಯನ್ನು ದುರ್ಬಲ ರಫ್ತು ಬೆಳವಣಿಗೆ, ಸುಧಾರಿತ ಅನುಭೋಗ, ಏರುತ್ತಿರುವ ಜನರ ಆದಾಯ, ನಿಧಾನಗತಿಯ ಹಣದುಬ್ಬರ, ಸದೃಢವಾದ ಬಂಡವಾಳ ಹೂಡಿಕೆ ಹಾಗೂ ಉಪ ಖಂಡದಲ್ಲಿನ ಆರ್ಥಿಕ ಚಟುವಟಿಕೆಗಳು ಸರಿದೂಗಿಸಲಿವೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.