ನವದೆಹಲಿ: ಭಾರತ ಮತ್ತು ಮಾರಿಷಸ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರ ಅಡಿ ಕೃಷಿ, ಜವಳಿ, ಎಲೆಕ್ಟ್ರಾನಿಕ್ಸ್ ಸೇರಿದಂತೆ 300ಕ್ಕೂ ಹೆಚ್ಚು ದೇಶೀಯ ಸರಕುಗಳು ಆಫ್ರಿಕನ್ ರಾಷ್ಟ್ರದಲ್ಲಿ ರಿಯಾಯಿತಿ ಕಸ್ಟಮ್ಸ್ ಸುಂಕದಲ್ಲಿ ಮಾರುಕಟ್ಟೆ ಪ್ರವೇಶ ಪಡೆಯಲಿವೆ.
ವಾಣಿಜ್ಯ ಕಾರ್ಯದರ್ಶಿ ಅನುಪ್ ವಾಧವನ್ ಮತ್ತು ಮಾರಿಷಸ್ ಸರ್ಕಾರದ ವಿದೇಶಾಂಗ ವ್ಯವಹಾರ, ಪ್ರಾದೇಶಿಕ ಏಕೀಕರಣ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಕಾರ್ಯದರ್ಶಿ ರಾಯಭಾರಿ ಹೇಮಂಡೊಯ್ಲ್ ಡಿಲ್ಲಮ್ ಅವರು ಪೋರ್ಟ್ ಲೂಯಿಸ್‌ನಲ್ಲಿ ಸೋಮವಾರ ಭಾರತ - ಮಾರಿಷಸ್ ಸಮಗ್ರ ಆರ್ಥಿಕ ಸಹಕಾರ ಮತ್ತು ಸಹಭಾಗಿತ್ವ ಒಪ್ಪಂದಕ್ಕೆ (ಸಿಇಸಿಪಿಎ) ಸಹಿ ಹಾಕಿದರು.
ಮಾರಿಷಸ್‌ನ ಪ್ರಧಾನಿ ಪ್ರವೀಂದ್ ಜುಗ್ನಾಥ್ ಮತ್ತು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಸಮ್ಮುಖದಲ್ಲಿ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ವಾಣಿಜ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಇಸಿಪಿಎ ಭಾರತದಲ್ಲಿ ಆಫ್ರಿಕಾದ ದೇಶದೊಂದಿಗೆ ಸಹಿ ಮಾಡಿದ ಮೊದಲ ವ್ಯಾಪಾರ ಒಪ್ಪಂದವಾಗಿದೆ. ಒಪ್ಪಂದವು ಆರಂಭಿಕ ದಿನಾಂಕದಿಂದ ಜಾರಿಗೆ ಬರಲಿದೆ ಎಂದಿದೆ.
ಈ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಕ್ಯಾಬಿನೆಟ್ ಫೆಬ್ರವರಿ 17ರಂದು ಅನುಮೋದನೆ ನೀಡಿತ್ತು. ಹೆಪ್ಪುಗಟ್ಟಿದ ಮೀನು, ವಿಶೇಷ ಸಕ್ಕರೆ, ಬಿಸ್ಕತ್ತು, ತಾಜಾ ಹಣ್ಣು, ಜ್ಯೂಸ್, ಖನಿಜಯುಕ್ತ ನೀರು, ಬಿಯರ್, ಆಲ್ಕೊಹಾಲ್ ಯುಕ್ತ ಪಾನೀಯ, ಸಾಬೂನು, ಚೀಲ, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಉಪಕರಣ, ಉಡುಪು ಸೇರಿದಂತೆ 615 ಉತ್ಪನ್ನಗಳಿಗೆ ಭಾರತಕ್ಕೆ ಆದ್ಯತೆಯ ಮಾರುಕಟ್ಟೆ ಪ್ರವೇಶದಿಂದ ಮಾರಿಷಸ್ ಪ್ರಯೋಜನ ಪಡೆಯಲಿದೆ.
ಇದನ್ನೂ ಓದಿ: ಆ ಒಂದೇ ಒಂದು ಟ್ವೀಟ್ಗೆ 1.10 ಲಕ್ಷ ಕೋಟಿ ರೂ. ಕಳೆದುಕೊಂಡ ಎಲಾನ್ ಮಸ್ಕ್: ಅಷ್ಟಕ್ಕೂ ಆತ ಬರೆದಿದ್ದು ಏನು?
ಊಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು 2018-19ರಲ್ಲಿ 1.2 ಶತಕೋಟಿ ಡಾಲರ್‌ಗಳಿಂದ 2019-20ರಲ್ಲಿ 690 ದಶಲಕ್ಷ ಡಾಲರ್‌ಗೆ ಇಳಿದಿದೆ. 2019-20ರಲ್ಲಿ ಭಾರತದ ರಫ್ತು ಒಟ್ಟು 662 ಮಿಲಿಯನ್ ಡಾಲರ್ ಆಗಿದ್ದರೆ, ಆಮದು 27.89 ಮಿಲಿಯನ್ ಡಾಲರ್ನಷ್ಟಿದೆ.