ನವದೆಹಲಿ: ಜಾಗತಿಕ ಆರ್ಥಿಕತೆಯ ಸ್ಥಿರ ಹಾಗೂ ನ್ಯಾಯಯುತ ರೂಪಾಂತರಕ್ಕೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಸನ್ನದ್ಧಗೊಳ್ಳಬೇಕು. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸುಧಾರಣೆಗೆ ಪ್ರಯತ್ನಿಸಬೇಕು ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆ ನೀಡಿದ್ದಾರೆ.
ಜಪಾನ್ ಒಸಾಕಾದಲ್ಲಿ ಇತ್ತೀಚೆಗೆ ನಡೆದಿದ್ದ ಜಿ-20 ಶೃಂಗಸಭೆಯಲ್ಲಿ ನೆರೆದಿದ್ದ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಮುಖಂಡರಿಗೆ ಪರೋಕ್ಷವಾಗಿ ಅಮೆರಿಕ ಆರ್ಥಿಕತೆಗೆ ಪ್ರತಿ ಸ್ಪರ್ಧೆಯಾಗುವಂತೆ ಕರೆ ನೀಡಿದ್ದಾರೆ. 'ಪ್ರಸ್ತುತ ಜಾಗತಿಕ ಆರ್ಥಿಕತೆಯು ಗೊಂದಲದಲ್ಲಿ ಸಿಲುಕಿಕೊಂಡಿದೆ. ವಿಶ್ವ ವ್ಯಾಪಾರದಲ್ಲಿ ಸಂರಕ್ಷಣಾ ಪ್ರವೃತ್ತಿಯನ್ನು ನಾವು ನಿಭಾಯಿಸಬೇಕಿದೆ' ಎಂದು ಸಲಹೆ ನೀಡಿದ್ದಾರೆ.
'ವಿದೇಶಿ ವಹಿವಾಟಿನಲ್ಲಿ ಡಾಲರ್ ಮೇಲಿನ ಅವಲಂಬನೆ ತಗ್ಗಿಸಬೇಕು' ಎಂಬ ಪ್ರಧಾನಿ ಮೋದಿಯ ನೀತಿಯನ್ನು ಪರೋಕ್ಷವಾಗಿ ಬೆಂಬಲಿಸಿದ ಪುಟಿನ್, 'ಸಂಭಾವ್ಯ ಆರ್ಥಿಕ ಅಸ್ಥಿರತೆಗಳನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ವ್ಯಾಪಾರಗಳಲ್ಲಿ ತಮ್ಮ ರಾಷ್ಟ್ರೀಯ ಕರೆನ್ಸಿಗಳನ್ನು ಹೆಚ್ಚಾಗಿ ಬಳಸುವಂತೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ'.
ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಭಾವ ಹೆಚ್ಚಾಗಬೇಕಾದರೇ ನಿಧಿ ಸುಧಾರಣೆಗೆ ಮುಂದಾಗಬೇಕು. ಮಾರುಕಟ್ಟೆಗಳ ಏಕಸ್ವಾಮ್ಯ ತಪ್ಪಿಸಲು ಹಾಗೂ ತಂತ್ರಜ್ಞಾನಗಳ ಪ್ರವೇಶ ತಡೆಯಲು ಸ್ಪಷ್ಟವಾದ ನಿಯಮಗಳನ್ನು ರೂಪಿಸಬೇಕು. ವಿಶ್ವ ವ್ಯಾಪಾರ ಸಂಸ್ಥೆಯ (ಡಬ್ಲ್ಯೂಟಿಒ) ಅಂಶಗಳನ್ನು ನಾಶಮಾಡುವ ಶಕ್ತಿಗಳ ಪ್ರಭಾವ ತಗ್ಗಸಿ ಜಗತ್ತಿನಲ್ಲಿನ ವ್ಯಾಪಾರ ಸಂಘರ್ಷಗಳಿಗೆ ಪ್ರತಿರೋಧ ಒಡ್ಡಬೇಕು ಎಂದು ಪುಟಿನ್ ಅಮೆರಿಕದ ಇತ್ತೀಚಿನ ನಡೆಗಳನ್ನು ಪರೋಕ್ಷವಾಗಿ ಅಣಕಿಸಿದರು.