ಹಣ ಗಳಿಸುವುದೂ ಒಂದು ಕಲೆ. ಹಾಗಾಗಿ, ನಮ್ಮಲ್ಲಿನ ಹಣವನ್ನು ದುಪ್ಪಟ್ಟು ಮಾಡಬೇಕಾದರೆ ಸೂಕ್ತ ಹೂಡಿಕೆಯನ್ನು ಆಯ್ದುಕೊಳ್ಳಬೇಕು. ಆರ್ಥಿಕವಾಗಿ ಸಬಲರಾಗಬೇಕಾದರೆ ಪ್ರತಿ ರೂಪಾಯಿಗೂ ಲೆಕ್ಕಾಚಾರ ಇಡುವುದು ಯಶಸ್ಸಿನ ಮೊದಲ ಮಂತ್ರವಾಗಿದೆ. ಗಳಿಸಿದ ಹಣವನ್ನು ಉಳಿಸುವ ಬಗೆ ಮತ್ತು ಅದನ್ನು ಇನ್ನಷ್ಟು ಬೆಳೆಸಲು ಎಲ್ಲಿ? ಹೇಗೆ ಹೂಡಿಕೆ ಮಾಡಬೇಕು ಎಂಬುದನ್ನು ತಿಳಿದಿರಬೇಕು. ಹೀಗಾಗಿ ಹಣವನ್ನು ಉಳಿಸುವ ಮತ್ತು ಬೆಳೆಸುವ ಬಗೆಗಳನ್ನು ತಿಳಿಯೋಣ.
50-20-30 ನಿಯಮ ಪಾಲಿಸಿ
ನಾವು ಗಳಿಸಿದ ಹಣವೆಲ್ಲವನ್ನು ವ್ಯಯ ಮಾಡದೇ ಅದನ್ನು ನಿಯಮಿತವಾಗಿ ಮತ್ತು ಅಗತ್ಯತೆಗೆ ಅನುಗುಣವಾಗಿ ಖರ್ಚು ಮಾಡಬೇಕು. ನಮ್ಮ ಆದಾಯದ ಶೇ.50 ರಷ್ಟನ್ನು ಮಾತ್ರ ಜೀವನೋಪಾಯಕ್ಕೆ ಬಳಸಿಕೊಂಡರೆ, ಇನ್ನುಳಿದ ಅರ್ಧದಷ್ಟು ಹಣವನ್ನು ಉಳಿಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು.
ಶೇ.50 ರಷ್ಟು ಹಣದಲ್ಲಿ ಶೇ.20 ಅಲ್ಪಾವಧಿ ಯೋಜನೆಗಳಲ್ಲಿ ವಿನಿಯೋಗ ಮಾಡಬೇಕು. ಅಂದರೆ ತುರ್ತು ಬಳಕೆಗೆ ಸಿಗುವಂತೆ ತುರ್ತು ನಿಧಿಗಳಲ್ಲಿ ಹೂಡಬೇಕು. ಇನ್ನು 30 ರಷ್ಟು ಭಾಗವನ್ನು ದೀರ್ಘಾವಧಿ ಯೋಜನೆಗಳಲ್ಲಿ ಹೂಡಬೇಕು. ಇದು ನಮ್ಮ ಮುಂದಿನ ನಿವೃತ್ತಿ ಜೀವನ, ಮಕ್ಕಳ ಉನ್ನತ ಶಿಕ್ಷಣ ಅಥವಾ ಆಸ್ತಿ, ಮನೆ ಖರೀದಿ ವೇಳೆ ಇದು ನೆರವಾಗುತ್ತದೆ. ನಿಮ್ಮ ಆದಾಯದ ಮೊತ್ತದಲ್ಲಿ 50-20-30 ನಿಯಮ ಪಾಲನೆ ಮಾಡಿದರೆ ಹಣ ದುಪ್ಪಟ್ಟು ಮತ್ತು ಅಗತ್ಯತೆಗಳೆರಡೂ ಪೂರೈಸಿಕೊಳ್ಳಲು ಸಾಧ್ಯ.
15-15-15 ನಿಯಮದ ಬಗ್ಗೆ ಗೊತ್ತೇ?
ನೀವು ಕೋಟ್ಯಧಿಪತಿಯಾಗಲು ಬಯಸಿದ್ದಾದರೆ, 15-15-15 ಮಾದರಿಯನ್ನು ಅಳವಡಿಸಿಕೊಳ್ಳುವುದು ಉತ್ತಮ. 3X15 ಮಾದರಿ ಹೂಡಿಕೆಯು ಹೆಚ್ಚು ಲಾಭದಾಯಕವಾಗಿದೆ. ಅದು ಹೇಗೆಂದರೆ, ಒಬ್ಬ ವ್ಯಕ್ತಿಯು ಯೋಜನೆಯೊಂದರಲ್ಲಿ 15 ವರ್ಷಗಳವರೆಗೆ 15,000 ರೂಪಾಯಿ ಹೂಡಿಕೆ ಮಾಡಿದರೆ, ಅದು 15 ಪ್ರತಿಶತ ಹಣವನ್ನು ಹೆಚ್ಚುವರಿಯಾಗಿ ಗಳಿಸುತ್ತದೆ. ಅಂತಿಮವಾಗಿ ಅದು 1 ಕೋಟಿ ರೂಪಾಯಿವರೆಗೆ ಗಳಿಕೆ ಮಾಡಲು ಸಾಧ್ಯವಾಗುತ್ತದೆ.
ಈ ಮಾದರಿ ಯೋಜನೆಯು ದೀರ್ಘಾವಧಿಯ ಹೂಡಿಕೆಯಾಗಿದೆ. ಅಲ್ಲದೇ, ಉತ್ತಮ ಆದಾಯವನ್ನು ಗಳಿಸಲು ಸಹಕಾರಿಯಾಗಿದೆ. ಷೇರುಪೇಟೆಗಳಲ್ಲಿ ಏರಿಳಿತಗಳಿದ್ದರೂ, ನಾವು ದೀರ್ಘಕಾಲ ಹೂಡಿಕೆ ಮಾಡುವುದನ್ನು ಮುಂದುವರಿಸಿದರೆ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ಸಾಧ್ಯ.
ವಯಸ್ಸಾನುಸಾರ ಇಕ್ವಿಟಿಗಳಲ್ಲಿ ಹೂಡಿಕೆ ಮಾಡಿ
ಇಕ್ವಿಟಿಯೂ ಹಣ ಗಳಿಕೆಯ ಉತ್ತಮ ಹಾದಿಯಾಗಿದೆ. ನೀವು ಇಕ್ವಿಟಿಗಳಲ್ಲಿ ಹೂಡಿಕೆ ಮಾಡಲು ಬಯಸಿದಾಗ ನಿಮ್ಮ ವಯಸ್ಸನ್ನು 100 ರಿಂದ ಕಳೆಯಬೇಕು. ಬಳಿಕ ವಯಸ್ಸಿಗನುಗುಣವಾಗಿ ನಿಮ್ಮ ಹೂಡಿಕೆ ಮೊತ್ತದಲ್ಲಿ ಶೇಕಡಾವಾರು ಇಕ್ವಿಟಿಯನ್ನು ನಿರ್ಧರಿಸಬೇಕು.
ಉದಾಹರಣೆಗೆ, ನೀವು 30 ವರ್ಷದವರಾಗಿದ್ದರೆ, 70% ವರೆಗೆ ಇಕ್ವಿಟಿಗಳಲ್ಲಿ ಹೂಡಿಕೆ ಮಾಡಬೇಕು. ಉಳಿದ 30 ಪ್ರತಿಶತವನ್ನು ಸಾಲವಾಗಿ ಪಡೆಯಬೇಕು. ಈ ಮಾದರಿ ಹೂಡಿಕೆ ವಯಸ್ಸಿಗನುಸಾರ ಬದಲಿಸುತ್ತಿರಬೇಕು. ಇಕ್ವಿಟಿಗಳಲ್ಲಿ ಇನ್ನೂ ಹಲವಾರು ಮಾದರಿಗಳಿವೆ. ಇವುಗಳ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ ಲಾಭಾಂಶವನ್ನು ಪಡೆದುಕೊಳ್ಳಬಹುದು.