ನವದೆಹಲಿ: 2017ರ ಜುಲೈನಿಂದ 2020ರ ಜನವರಿವರೆಗೆ ಜಿಎಸ್‌ಟಿ ಪಾವತಿಯ ವಿಳಂಬಕ್ಕೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ಕೋವಿಡ್-19 ಲಾಕ್‌ಡೌನ್ ಬಳಿಕ ಇದೇ ಮೊದಲ ಬಾರಿಗೆ ಅವರು ವಿಡಿಯೋ ಸಂವಾದದ ಮೂಲಕ ಜಿಎಸ್‌ಟಿ ಮಂಡಳಿ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್‌ನಿಂದಾಗಿ ಜಿಎಸ್‌ಟಿ ಸಂಗ್ರಹದ ಮೇಲಿನ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ತೆರಿಗೆದಾರರು 2020ರ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಜಿಎಸ್‌ಟಿ ಪಾವತಿ ವಿಳಂಬ ಮಾಡಿರುವುದಕ್ಕೆ ವಿಧಿಸುವ ವಾರ್ಷಿಕ ಬಡ್ಡಿದರದಲ್ಲಿ ಶೇ 18 ರಿಂದ 9ಕ್ಕೆ ಇಳಿಕೆ ಮಾಡಲಾಗಿದೆ. ಇದು 5 ಕೋಟಿ ರೂಪಾಯಿವರೆಗೆ ವ್ಯವಹಾರ ಮಾಡುವವರಿಗೆ ಅನ್ವಯಿಸಲಿದೆ. ಮಾತ್ರವಲ್ಲದೆ, ಮುಂದಿನ ಸೆಪ್ಟೆಂಬರ್ 30ರ ವರೆಗೆ ಈ ನಿಯಮ ಅನ್ವಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
2017ರ ಜುಲೈನಿಂದ 2020ರ ಜನವರಿಯವರಿಗೆ ಸಾಕಷ್ಟು ಪಾವತಿಗಳು ಬಾಕಿ ಉಳಿದಿವೆ. ಈ ಅವಧಿಯಲ್ಲಿ ಬಾಕಿ ಉಳಿಸಿಕೊಂಡಿರುವವರಿಗೆ ವಿಳಂಬ ಶುಲ್ಕ ಇರುವುದಿಲ್ಲ. ತೆರಿಗೆಗೆ ಒಳಪಡುವವರು 2017ರ ಜುಲೈನಿಂದ 2020ರ ಜನವರಿ ವರೆಗೆ ನಾನ್ ಫೈಲಿಂಗ್ ಜಿಎಸ್‌ಟಿಆರ್-3ಬಿ ತೆರಿಗೆ ಪಾವತಿ ಮಾಡಿದವರಿಗೆ ಗರಿಷ್ಠ 500 ರೂಪಾಯಿವರೆಗೆ ಶುಲ್ಕ ಮನ್ನಾ ಮಾಡಲಾಗಿದೆ. ಇದು 2020ರ ಸೆಪ್ಟೆಂಬರ್ 30ರ ವರೆಗೆ ಅನ್ವಯವಾಗಲಿದೆ. ಜಿಎಸ್‌ಟಿ ಪರಿಹಾರದ ಬಗ್ಗೆ ಮುಂದಿನ ಜುಲೈನಲ್ಲಿ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ.